ಆಸಿಡ್ ನಾಗನ ವಿರುದ್ಧ 300 ಪುಟ ಆರೋಪ ಪಟ್ಟಿ

ಬೆಂಗಳೂರು,ಜು.೨೨- ಯುವತಿಯ ಮೇಲೆ ಆಯಸಿಡ್ ಎರಚಿದ್ದ ವಿಕೃತ ಪ್ರೇಮಿ ನಾಗೇಶ್‌ನ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಲು ೩೦೦ ಪುಟಗಳ ಆರೋಪಪಟ್ಟಿ (ಚಾರ್ಜ್‌ಶೀಟ್) ಯನ್ನು ಸಿದ್ಧಪಡಿಸಿದ್ದಾರೆ.
ಸುಂಕದಕಟ್ಟೆಯಿಂದ ಪರಾರಿಯಾಗಿ ಆರೋಪಿ ಉಳಿದುಕೊಂಡಿದ್ದ ತಿರುವಣ್ಣಮಲೈ ಸೇರಿದಂತೆ ೧೩ ಕಡೆಗಳಲ್ಲಿ ಮಹಜರು ಮಾಡಿರುವುದನ್ನು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಥಮಿಕ ಆರೋಪ ಪಟ್ಟಿಯಲ್ಲಿ ೬೦ ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹತ್ತು ಪುಟಗಳಲ್ಲಿ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಯುವತಿಗೆ ಹಾಕಿದ ಆಯಸಿಡ್ ಸೆಲ್ಪೂರಿಕ್ ಆಯಸಿಡ್ ಎನ್ನುವುದು ಎಫ್‌ಎಸ್‌ಎಲ್ ವರದಿಯಿಂದ ಗೊತ್ತಾಗಿದೆ.
ಯುವತಿಯ ಬಟ್ಟೆ ಮೇಲೆ ಬಿದ್ದಿದ್ದ ಆಯಸಿಡ್, ಕೂದಲು, ಚರ್ಮ ಎಲ್ಲದರ ಎಫ್‌ಎಸ್‌ಎಲ್ ವರದಿಯಲ್ಲಿ ಸಲ್ಫೂರಿಕ್ ಎಂಬುದು ದೃಢವಾಗಿದೆ. ಬರೋಬ್ಬರಿ ಒಂಭತ್ತು ಲೀಟರ್ ಆಯಸಿಡ್ ಖರೀದಿಸಿದ್ದ ಆರೋಪಿಯು, ಅರ್ಧ ಲೀಟರ್ ಯುವತಿ ಮೇಲೆ ಎರಚಿ ಉಳಿದರ್ಧ ಲೀಟರ್ ಬಿಸಾಕಿದ್ದ. ೮ ಲೀಟರ್ ಆಯಸಿಡ್ ಅನ್ನು ಜಪ್ತಿ ಮಾಡಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಫೋನ್ ಕರೆ ಸೇರಿದಂತೆ ಬಲವಾದ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಯುವತಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ೧೬೪ ಹೇಳಿಕೆ ದಾಖಲಿಸಬೇಕಿದೆ. ಆ ಬಳಿಕ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ.