ಆಸಿಡ್ ನಾಗನ ಕಾಲಿಗೆ ಗುಂಡೇಟು

ಕೆಂಗೇರಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಆಸಿಡ್ ದಾಳಿಕೋರನಿಗೆ ಪೊಲೀಸರು ಕಾಲಿಗೆ ಗುಂಡಿಕ್ಕಿ, ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಂಗಳೂರು,ಮೇ.೧೪-ಯುವತಿಯ ಮೇಲೆ ಆ?ಯಸಿಡ್ ದಾಳಿ ನಡೆಸಿದ್ದ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಗೆ ಗುಂಡು ಹೊಡೆದು ತಕ್ಕ ಮಾಡಿರುವ ಪಶ್ಚಿಮ ವಿಭಾಗದ ಪೊಲೀಸರು ಮುಂದೆ ಯಾರೂ ಆಸಿಡ್ ದಾಳಿಗೆ ಮುಂದಾಗದಂತೆ ಎಚ್ಚರಿಕೆ ಗಂಟೆ ಮೊಳಗಿದ್ದಾರೆ.
ಸುಂಕದಕಟ್ಟೆಯ ಬಳಿ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ್ದ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಕಾಲಿಗೆ ಗುಂಡು ಹೊಡೆದು ಮುಂದೆ ಇಂತಹ ಕೃತ್ಯಕ್ಕೆ ಕೈ ಹಾಕಿದರೆ ತಕ್ಕ ಶಾಸ್ತಿ ಎಂಬ ಎಚ್ಚರಿಕೆ ಸಂದೇಶವನ್ನು ಖಾಕಿಪಡೆ ರವಾನಿಸಿದೆ.
ಪೊಲೀಸರ ಗುಂಡೇಟು ಬಲಗಾಲಿನ ಮೊಣಕಾಲಿನ ಚಿಪ್ಪಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ನಾಗೇಶ್ ನನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
ಆರೋಪಿ ತಪ್ಪಿಸಿಕೊಳ್ಳಲು ಕಲ್ಲಿನಿಂದ ಹಲ್ಲೆ ನಡೆಸಿದ್ದರಿಂದ ಗಾಯಗೊಂಡ ಕಾಮಾಕ್ಷಿಪಾಳ್ಯ ಠಾಣೆ ಮುಖ್ಯ ಪೇದೆ ಮಹದೇವಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನ ತಿರುಣ್ಣಾಮಲೈನ ರಮಣಶ್ರೀ ಆಶ್ರಮದ ಸ್ವಾಮೀಜಿಯ ವೇಷದಲ್ಲಿದ್ದ ನಾಗೇಶ್ ನನ್ನು ಪಶ್ಚಿಮ ವಿಭಾಗದ ಪೊಲೀಸರು ಭಕ್ತರ ಸೋಗು ಹಾಕಿ ಬಂಧಿಸಿ ತಡ ರಾತ್ರಿ ನಗರಕ್ಕೆ ಕರೆದುಕೊಂಡು ಬರುತ್ತಿದ್ದರು.
ಮಾರ್ಗ ಮಧ್ಯದ ಕೆಂಗೇರಿಯ ನೈಸ್ ರಸ್ತೆಯ ಬಳಿ ರಾತ್ರಿ ೧.೩೦ರ ವೇಳೆ ಮೂತ್ರ ವಿಸರ್ಜನೆಗೆ ನಿಲ್ಲಿಸಿ ಎಂದು ಆರೋಪಿ ಆದರೆ ಇದಕ್ಕೆ ಅವಕಾಶ ಕೊಡದ ಪೊಲೀಸರು ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ದರು.
ಈ ವೇಳೆ ನಾಗೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಮುಖ್ಯಪೇದೆ ಮಹಾದೇವಯ್ಯ ನಾಗೇಶ್‌ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಅಷ್ಟರಲ್ಲೇ ಆರೋಪಿ ಮಹಾದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದಾಗ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ಆರೋಪಿಯನ್ನು ಹಿಡಿಯಲು ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು
ಆದರೆ ನಾಗೇಶ್ ಹಲ್ಲೆ ಮುಂದುವರೆಸಿ ತಪ್ಪಿಸಿಕೊಳ್ಳಲು ಮುಂದಾದಾಗ ಪೊಲೀಸರು ಆರೋಪಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿ ಪ್ರಾಥಮಿಕ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ಆರೋಪಿಯನ್ನು ದಾಖಲು ಮಾಡಲಾಗಿದೆ.
ವಾರದ ಬಳಿಕ ಸೆರೆ:
ಅನ್ನಪೂರ್ಣೇಶ್ವರಿನಗರದ ‘ಡಿ’ ಗ್ರೂಪ್ ಲೇಔಟ್ ನಿವಾಸಿ ನಾಗೇಶ್(೩೪) ಆಸಿಡ್ ದಾಳಿ ಬಳಿಕ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರ ೧೦ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು.
ಆರೋಪಿಯ ಬಗ್ಗೆ ಸಣ್ಣ ಸುಳಿವು ಸಿಗದ ಪರಿಣಾಮ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್ ಭಾಷೆಯಲ್ಲಿ ಆರೋಪಿಯ ಭಾವಚಿತ್ರ ಸಹಿತ ಕರಪತ್ರ ಮುದ್ರಿಸಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳು, ಆಶ್ರಯಮಗಳು, ಮಠಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಹಂಚಲಾಗಿತ್ತು.
ರೋಪಿಗೆ ಬಲೆ:
ಪೊಲೀಸರ ಒಂದು ತಂಡ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿಯೂ ಕರಪತ್ರ ಹಂಚಿತ್ತು. ಈ ಕರಪತ್ರದಲ್ಲಿ ಮುದ್ರಿತವಾಗಿದ್ದ ಭಾವಚಿತ್ರ ಗಮನಿಸಿದ್ದ ಸ್ಥಳೀಯರು ಕೆಲ ದಿನಗಳಿಂದ ಆಶ್ರಮದಲ್ಲಿ ಕಾವಿಧಾರಿಯಾಗಿ ಇರುವ ನಾಗೇಶ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಪೊಲೀಸರು ನಿನ್ನೆ ಸಂಜೆ ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿ ಕಾವಿಧಾರಿಯಾಗಿದ್ದ ನಾಗೇಶ್‌ನ ಚಲನವಲನದ ಮೇಲೆ ನಿಗಾವಹಿಸಿದ್ದರು. ಬಳಿಕ ಆಶ್ರಮದ ಮೇಲ್ವಿಚಾರಕರನ್ನು ಸಂಪರ್ಕಿಸಿ ನಾಗೇಶ್‌ನ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಕಾವಿಬಟ್ಟೆಕಳಚಿಸಿ ವಿಚಾರಣೆ ಮಾಡಿದಾಗ ನಾಗೇಶನ್ ನಿಜ ಸ್ವರೂಪ ಬೆಳಕಿಗೆ ಬಂದಿದೆ.
ಏ.೨೮ರಂದು ದಾಳಿ:
ಆರೋಪಿ ನಾಗೇಶ್ ತನ್ನನ್ನು ಪ್ರೀತಿಸುವಂತೆ ೨೫ ವರ್ಷದ ಯುವತಿ ಹಿಂದೆ ಬಂದಿದ್ದ. ಪ್ರೀತಿ ನಿರಾಕರಿಸಿದ್ದ ಯುವತಿ ತನ್ನಪಾಡಿಗೆ ತಾನು ಇದ್ದಳು. ಎಂಕಾಂ ಪದವಿಧರೆಯಾದ ಯುವತಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಏ.೨೮ರಂದು ಬೆಳಗ್ಗೆ ಸುಂಕದಕಟ್ಟೆಯಲ್ಲಿರುವ ಕಂಪನಿಯ ಕಚೇರಿ ಬಳಿ ಬಂದಿದ್ದಳು. ಈ ವೇಳೆ ಆ?ಯಸಿಡ್ ತುಂಬಿದ ಬಾಟಲಿಯೊಂದಿಗೆ ಪ್ರತ್ಯಕ್ಷನಾದ ಕಿಡಿಗೇಡಿ ನಾಗೇಶ್, ಏಕಾಏಕಿ ಯುವತಿ ಮೇಲೆ ಆ?ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ನಾಗೇಶ್ ಆಸಿಡ್ ದಾಳಿ ಬಳಿಕ ಕೆಲ ವಕೀಲರನ್ನು ಸಂಪರ್ಕಿಸಿ ತನ್ನ ಪರ ವಕಾಲತ್ತು ವಹಿಸುವಂತೆ ದುಂಬಾಲು ಬಿದ್ದಿದ್ದ. ಆದರೆ, ಇದು ಗಂಭೀರ ಪ್ರಕರಣವಾಗಿದ್ದರಿಂದ ವಕೀಲರು ವಕಾಲತ್ತು ವಹಿಸಲು ಹಿಂದೇಟು ಹಾಕಿದ್ದರು. ಈ ವೇಳೆ ಆರೋಪಿ ಮೆಜೆಸ್ಟಿಕ್‌ನಲ್ಲಿ ದ್ವಿಚಕ್ರ ವಾಹನ ಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಮತ್ತೊಂದು ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದರು. ೧೫ ದಿನ ಕಳೆದರೂ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ೧೬ನೇ ದಿನ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೈವಭಕ್ತ ಕಿಡಿಗೇಡಿ:
ಆರೋಪಿ ನಾಗೇಶ್ ಅಪ್ಪಟ ದೈವ ಭಕ್ತನಾಗಿದ್ದ. ಬೆಂಗಳೂರಿನಲ್ಲಿ ಇರುವಾಗಲೂ ಮಠ, ದೇವಸ್ಥಾನ, ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದ. ಮನೆಯಲ್ಲೂ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮುಜುಗರದ ಸ್ವಭಾವ ಹೊಂದಿದ್ದ. ಆಸಿಡ್ ದಾಳಿ ಬಳಿಕ ಆರೋಪಿ ಸ್ವಾಮೀಜಿ ವೇಷತೊಟ್ಟು ತಲೆಮರೆಸಿಕೊಂಡಿದ್ದ. ಆರೋಪಿಯು ತಿರುವಣ್ಣಾಮಲೈನ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿ ಖಾವಿಧಾರಿಯಾಗಿ ಧಾನ್ಯ, ಜಪ-ತಪ ಮಾಡಿಕೊಂಡಿದ್ದ. ಆಶ್ರಮದಲ್ಲಿ ಉಚಿತ ಊಟ, ವಸತಿ ಸೌಲಭ್ಯ ಇದ್ದಿದ್ದರಿಂದ ಆರೋಪಿಯು ಕಾವಿಧಾರಿಯಾಗಿ ತನ್ನ ಗುರುತು ಮರೆಮಾಚಿಕೊಂಡು ಕಾಲ ಕಳೆಯುತ್ತಿದ್ದ. ಅಲ್ಲಿಗೆ ಬರುವ ಭಕ್ತರಿಗೆ ತಾನು ಸ್ವಾಮೀಜಿ ಎಂದು ನಂಬಿಸಿದ್ದ ಎಂದು ತಿಳಿಸಿದರು.

ತ್ವರಿತ ವಿಚಾರಣೆ
ಯುವತಿಯ ಮೇಲೆ ಆಸಿಡ್ ಎರಚಿ ಅಮಾನುಷ ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ಗೆ ಉಗ್ರ ಶಿಕ್ಷೆ ಆಗುವಂತೆ ನೋಡಿಕೊಳ್ಳಲು ವಿಧಿಸಲು ಫಾಸ್ಟ್‌ಟ್ರಾಕ್ (ತ್ವರಿತ ವಿಚಾರಣೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಆರೋಪಿಗೆ ತಕ್ಕ ಶಿಕ್ಷೆಯಾದರೆ ಸಂತ್ರಸ್ತ ಯುವತಿ ಹಾಗೂ ಕುಟುಂಬಕ್ಕೆ ಸ್ವಲ್ಪವಾದರು ನೆಮ್ಮದಿ ದೊರಕಿದಂತಾಗುವುದು. ಹಾಗಾಗಿ ಫಾಸ್ಟ್‌ಟ್ರಾಕ್ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆಗೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಶೀಘ್ರ ಚೇತರಿಸಿಕೊಂಡು ಗುಣಮುಖವಾಗಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.
ಅಭಿನಂದನೆ
ನಾಗೇಶ್‌ನನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ ಹೇಳಿರುವ ಗೃಹ ಸಚಿವರು, ನಮ್ಮ ಪೊಲೀಸರು ಅತ್ಯಂತ ಶ್ರಮ, ದಕ್ಷತೆಯಿಂದ ತಮಿಳುನಾಡಿನಲ್ಲಿ ಅಡಗಿದ್ದ ನಾಗೇಶ್‌ನನ್ನು ಬಂದಿಸುವ ಮೂಲಕ ದೇಶದಲ್ಲಿಯೇ ಕರ್ನಾಟಕ ಪೊಲೀಸರು ಅತ್ಯಂತ ದಕ್ಷತೆಯ ಹಾಗೂ ವೃತ್ತಿಪರ ಪೊಲೀಸ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಸಹಕಾರ ನೀಡಿದ ತಮಿಳುನಾಡು ಪೊಲೀಸರಿಗೆ ಗೃಹ ಸಚಿವ ಅರಗಜ್ಞಾನೇಂದ್ರ ಅಭಿನಂದನೆ ಹೇಳಿದ್ದಾರೆ.