ಆಸರೆ ವಕ್ವಾಡಿ ಮತ್ತು ವಕ್ವಾಡಿ ಪ್ರೆಂಡ್ಸ್ (ರಿ.) ಸಂಸ್ಥೆಗಳಿಂದ ಕಿಟ್ ವಿತರಣೆ

ಮಂಗಳೂರು, ಜೂ.೯- ದುಬಾಯಿ ಅಲ್ಲಿನ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ) ಅಧ್ಯಕ್ಷ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ವಕ್ವಾಡಿ ಅವರು ಕೊರೋನಾ ೨ನೇ ಅಲೆಯ ಸಂಕಷ್ಟದಲ್ಲಿ ಆಥಿಕವಾಗಿ ಹಿಂದುಳಿದ ಜನತೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಕೊರೋನಾ ಒಂದನೇ ಅಲೆಯಲ್ಲಿ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ದುಬಾಯಿನಲ್ಲಿ ಹೋಟೆಲ್ ಉದ್ಯಮ ಮುಚ್ಚಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರಿಗೆ ಪ್ರವೀಣ್ ಶೆಟ್ಟಿ ಅವರು ಸ್ವಂತ ಖರ್ಚಿನಲ್ಲಿ ಚಾರ್ಟರ್ಡ್ ವಿಮಾನದ ಮೂಲಕ ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಮಾತ್ರವಲ್ಲ ತನ್ನ ಹೋಟೆಲ್ ಮುಚ್ಚಿದ್ದರೂ ಕೂಡ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಹಿತ ವೇತನ ನೀಡಿ ಮಾನವೀಯತೆ ಮೆರೆದಿದ್ದರು. ಅಂತೆಯೇ ಈ ಬಾರಿ ಕೊರೋನಾ ಲಾಕ್‌ಡೌನ್ ಹಿನ್ನೆಲೆ ಉದ್ಯಮಗಳು ಸ್ಥಗಿತವಾಗಿದ್ದು, ವ್ಯಾಪಾರ ವಹಿವಾಟುಗಳೂ ಸ್ಥಗಿತಗೊಂಡ ಕಾರಣ ದೈನಂದಿನವಾಗಿ ದುಡಿದು ಗಳಿಕೆಯಿಂದ ಮನೆಮಂದಿಯನ್ನು ಸಾಕುತ್ತಿದ್ದ ಅನೇಕ ಗ್ರಾಮೀಣ ಭಾಗದಲಿನ ಬಹಳಷ್ಟು ಮಂದಿ ಕೆಲಸ ಕಾರ್ಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಅಂತಹ ಕುಟುಂಬಗನ್ನು ಗುರುತಿಸಿದ ಪ್ರವೀಣ್‌ಕುಮಾರ್ ಶೆಟ್ಟಿ ಅವರು ಲಕ್ಷಾಂತರ ಮೌಲ್ಯದ ನಿತ್ಯ ಬಳಕೆಯ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ವಕ್ವಾಡಿ ಪ್ರೆಂಡ್ಸ್ (ರಿ.) ವಕ್ವಾಡಿ ಮತ್ತು ಆಸರೆ ವಕ್ವಾಡಿ ಸಂಸ್ಥೆಗಳ ಮುಖೇನ ನೀಡಿ ಸಹಕರಿಸಿದ್ದಾರೆ.
ಉಭಯ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ವಕ್ವಾಡಿಯಾದ್ಯಂತದ ಕುಟುಂಬಗಳಿಗೆ ಕಿಟ್‌ಗಳನ್ನು ಮನೆಮನೆಗೆ ತೆರಳಿ ವಿತರಿಸಿದ್ದಾರೆ. ಅಲ್ಲದೆ ಎರಡೂ ಸಂಸ್ಥೆಗಳೂ ವೈಯಕ್ತಿಕವಾಗಿಯೂ ಪ್ರತ್ಯೇಕ ೧೦೦ ದಿನಸಿ ಕಿಟ್ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ವಕ್ವಾಡಿ ರಘುರಾಮ್ ಶೆಟ್ಟಿ, ಪ್ರವೀಣ್ ಶೆಟ್ಟಿ ಸಣ್ಣಗಲ್ ಮನೆ, ಸತೀಶ್ ಪೂಜಾರಿ, ಆನಂದ್ ಆಚಾರ್, ಕೀರ್ತಿ ಶೆಟ್ಟಿ, ಅಂಕಿತ್ ಶೆಟ್ಟಿ, ಪವನ್ ಶೆಟ್ಟಿ, ಹರೀಶ್, ಕಿರಣ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕರೋನಾ ನಿಯಂತ್ರಣ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.