ಆಸಕ್ತಿ, ಹೆಚ್ಚಿನ ಅವಕಾಶಗಳ ಕೋರ್ಸ್‍ಗಳನ್ನು ಆಯ್ಕೆಮಾಡಿಕೊಳ್ಳಿ

ಕಲಬುರಗಿ:ಡಿ.10: ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಮತ್ತು ವೃತ್ತಿಗಳ ಆಯ್ಕೆಯ ಸೂಕ್ತ ಮಾಹಿತಿ ಪಡೆಯಬೇಕು. ಕೆಲವೇ ಕೋರ್ಸ್‍ಗಳ ಬಗ್ಗೆ ಹೆಚ್ಚಿನ ಆಯ್ಕೆ ಬೇಡ. ಪಾಲಕ-ಪೋಷಕರು ನಿಮ್ಮ ಮಕ್ಕಳ ಕೋರ್ಸ್‍ನ್ನು ನೀವೇ ನಿರ್ಧರಿಸಿ, ಅದೇ ಮಾಡಬೇಕು ಎಂಬ ಒತ್ತಡ ಸಲ್ಲದು. ವಿದ್ಯಾರ್ಥಿಗಳು ನಿಮ್ಮ ಆಸಕ್ತಿ, ಹೆಚ್ಚು ಉದ್ಯೋಗಾವಕಾಶಗಳು ದೊರೆಯುವ ಕೋರ್ಸ್‍ನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಳಗಿ ತಾಲೂಕಿನ ಹೆಬ್ಬಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಇವುಗಳು ಜಂಟಿಯಾಗಿ ಭಾನವಾರ ಏರ್ಪಡಿಸಿದ್ದ ‘ಕರಿಯರ್ ಗೈಡನ್ಸ್ ಉಪನ್ಯಾಸ’ ಮತ್ತು ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಎಲ್ಲಾ ಕೋರ್ಸ್‍ಗಳ ಮಹತ್ವ, ಉದ್ಯೋಗಾವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ, ಅಂತಿಮವಾಗಿ ಕೋರ್ಸ್‍ನ ಆಯ್ಕೆ ಅವರಿಗೆ ನೀಡಬೇಕು. ಪ್ರಸ್ತುತವಾಗಿ ಸಿಸಿಟಿ, ಸೈಬರ್ ಸೆಕ್ಯೂರಿಟಿ, ಕೃತಕ ಬುದ್ಧಿಮತ್ತೆ, ನೆಟ್‍ವರ್ಕ ಸೆಕ್ಯೂರಿಟಿ, ಕ್ಲೌಟ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಕೋರ್ಸ್‍ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದ್ದು, ಈ ಕೋರ್ಸಗಳತ್ತ ವಿದ್ಯಾರ್ಥಿಗಳು ಚಿತ್ತಹರಿಸಿದರೆ, ಖಂಡಿತವಾಗಿಯೂ ಹೆಚ್ಚಿನ ವೇತನದ ಉದ್ಯೋಗಾವಕಾಶಗಳು ಲಭ್ಯವಾಗಿವೆ ಎಂದು ವಿವರಣೆ ನೀಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಯಾವುದೇ ಒಬ್ಬ ವ್ಯಕ್ತಿಯು ಬದುಕಿ, ಬಾಳಬೇಕಾದರೆ ಅತನಿಗೆ ಜೀವಿಸುವ, ಸ್ವಾತಂತ್ರ್ಯ, ಅಭಿವ್ಯಕ್ತಿ, ಶಿಕ್ಷಣ, ರಕ್ಷಣೆ, ಸಮಾನತೆ ಅಂತಹ ಮುಂತಾದ ಹಕ್ಕುಗಳು ಅವಶ್ಯಕವಾಗಿ ಬೇಕು. ಇದರಿಂದ ವ್ಯಕ್ತಿ ಬೆಳವಣಿಗೆಯಾಗಲು ಸಾಧ್ಯವಿದೆ. ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ವಿಶ್ವಸಂಸ್ಥೆಯು 10ನೇ ಡಿಸೆಂಬರ, 1948ರಂದು 30 ಅಂಶಗಳನ್ನಳಗೊಂಡ ಮಾನವ ಹಕ್ಕುಗಳನ್ನು ಘೋಷಿಸಿತು. ಈ ಎಲ್ಲಾ ಅಂಶಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ 1993ರಲ್ಲಿ ‘ಮಾನವ ಹಕ್ಕುಗಳ ಆಯೋಗ’ವನ್ನು ರಚಿಸಲಾಗಿದೆ. ಅದಕ್ಕೆ ಇನ್ನೂ ಹೆಚ್ಚಿನ ಅಧಿಕಾರ ನೀಡುವ ಮೂಲಕ, ಬಲ ಪಡಿಸಬೇಕಾಗಿದೆ ಎಂದರು.
ಅಬಕಾರಿ ಇನ್ಸಸ್ಪೆಕ್ಟರ್ ಪ್ರಕಾಶ ಜಾಧವ ಮತ್ತು ಯೋಧ ಶಂಕರಲಿಂಗ ತಳವಾರ ಮಾತನಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು. ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಮಹಾದೇವಪ್ಪ ಎಚ್.ಬಿರಾದಾರ, ಚೇತನರೆಡ್ಡಿ ಶೇರಿಕಾರ, ಪ್ರಕಾಶಕುಮಾರ ರಾಠೋಡ್, ಶ್ರೀದೇವಿ ವಟವಟಿ, ಪ್ರದೀಪಕುಮಾರ ಪವಾಡಿ, ಸದಾಶಿವ ಹಿರೇಮಠ, ಮಹಾಲಿಂಗ, ಗಜಾನನ ನೀಲೂರ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.