ಆಸಕ್ತಿ ಕ್ಷೇತ್ರದಲ್ಲಿ ಮುಂದುವರಿಯಿರಿ: ಪ್ರೊ.ಮಾಸಿಮಾಡೆ

ಬೀದರ್:ಮಾ.30: ವಿದ್ಯಾರ್ಥಿಗಳು ಸಾಧನೆಗಾಗಿ ತಮ್ಮ ಆಸಕ್ತಿ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಸಲಹೆ ಮಾಡಿದರು.

ಇಲ್ಲಿಯ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ನಂತರ ಅಧ್ಯಯನಕ್ಕೆ ಕಲಾ, ವಾಣಿಜ್ಯ, ವಿಜ್ಞಾನ ಸೇರಿ ಹಲವು ಆಯ್ಕೆಗಳಿವೆ. ಕಠಿಣ ಪರಿಶ್ರಮದಿಂದ ಗುರಿ ತಲುಪಬಹುದಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು ಎಂದರು.

ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಅದರ ಸಾಕಾರಕ್ಕೆ ಗುರುಗಳ ಮಾರ್ಗದರ್ಶನ ಪಡೆಯಬೇಕು. ಗುರುಗಳು ಹಾಗೂ ಪಾಲಕರನ್ನು ಸದಾಕಾಲ ಗೌರವಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಏನೇ ಆದರೂ ಸಮಾಜ ಗೌರವಿಸುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಮಾತನಾಡಿದರು.

ಸಮತಾ ಪ್ರೌಢಶಾಲೆ ಮುಖ್ಯಶಿಕ್ಷಕ ಬಳಿರಾಮ ಕುರನಾಳೆ, ಜೀಜಾಮಾತಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ರಮೇಶ ಬಿರಾದಾರ, ಜೀಜಾಮಾತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಾಸುದೇವ ರಾಠೋಡ್, ಶಿಕ್ಷಕರಾದ ಆನಂದ ಕೆ. ಜಾಧವ್, ನಾಗರತ್ನಾ ಟಿ, ಸಂಜಯ ಪಾಟೀಲ, ರಾಜಕುಮಾರ ಗಾದಗೆ, ಪ್ರಭಣ್ಣ ಕಾಳಗೊಂಡ ಇದ್ದರು.

ಮೋಹನ್ ಜೋಶಿ ಸ್ವಾಗತಿಸಿದರು. ತಾನಾಜಿ ಆರ್. ನಿರಗುಡೆ ನಿರೂಪಿಸಿದರು. ಅನಿಲಕುಮಾರ ಟೇಕೋಳೆ ವಂದಿಸಿದರು.