ಆಶ್ರಯ ಯೋಜನೆಯಡಿ ನಿವೇಶನ ನೀಡಲು ಮನವಿ

ದಾವಣಗೆರೆ.ಮಾ.26; ಆಶ್ರಯ ಯೋಜನೆಯಡಿ ನಿವೇಶನ ಒದಗಿಸಲು ಸರ್ಕಾರಮಟ್ಟದಲ್ಲಿ ಅನುಮೋದನೆ ದೊರೆತಿದೆ.ಜಮೀನು ನೀಡಲು ರೈತರು ಸಹ ಮುಂದೆ ಬಂದಿದ್ದಾರೆ.ಆದರೆ ಸರ್ಕಾರದ ದರ ವ್ಯತ್ಯಾಸದಿಂದಾಗಿ ನಮಗೆ ನಿವೇಶನ ದೊರೆಯುವಲ್ಲಿ ತಡವಾಗುತ್ತಿದೆ.ವ್ಯತ್ಯಾಸದ ಹಣವನ್ನು ನಾವೇ ಭರಿಸಲು ಸಿದ್ದರಿದ್ದೇವೆ ಆದರೆ ಜಿಲ್ಲಾಡಳಿತ ನಮಗೆ ನೆರವು ನೀಡುತ್ತಿಲ್ಲ ಎಂದು ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರಗಳ ಗೂಡ್ಸ್ ವಾಹನಗಳ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಪಳನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕಳೆದ 2017 ರ ನವಂಬರ್ 11ರಂದು ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಆಶ್ರಯ ಯೋಜನೆಯಡಿ ಜಮೀನು ಖರೀದಿಸಲು ದರ ಸಂಧಾನ ಸಭೆ ಹಮ್ಮಿಕೊಳ್ಳಲಾಗಿತ್ತು.ನಮಗೆ ನಿವೇಶನ ಒದಗಿಸಲು ಕಕ್ಕರಗೊಳ್ಳ ಗ್ರಾಮದ ಜಮೀನು ಗುರುತಿಸಲಾಗಿತ್ತು ಆದರೆ ದರ ನಿಗಧಿಯಲ್ಲಿ ವ್ಯತ್ಯಯವಾಗಿದೆ ಎಂದು ಹೇಳಲಾಗಿದೆ.ಸರ್ಕಾರ ನೀಡಿದ ಪರಿಹಾರದ ವ್ಯತ್ಯಯವಾದ ಹಣವನ್ನು ಭರಿಸಲು ನಾವು ಸಿದ್ದರಿದ್ದೇವೆ ಆದರೆ ಈ ಹಣವನ್ನು ಯಾವ ಖಾತೆಗೆ ಪಾವತಿಸಬೇಕು ಹಾಗೂ ನಿಯಮಗಳನ್ನು ತಿಳಿಸಬೇಕೆಂದು ಒತ್ತಾಯಿಸಿ ಹಲವಾರು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಾ, ಮನವಿ ನೀಡುತ್ತಾ ಬಂದಿದ್ದೇವೆ ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಜಮೀನು ಮಾಲೀಕರು ನಿವೇಶನಕ್ಕಾಗಿ ತಮ್ಮ ಜಮೀನು ನೀಡಲು ಸಿದ್ದರಿದ್ದಾರೆ.ಹೆಚ್ಚುವರಿ ಮೊತ್ತ ಪಾವತಿಸಲು ನಾವು ಸಿದ್ದರಿದ್ದರೂ ಕೂಡ ನಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೂ ಸಹ ನಮ್ಮ ಮನವಿ ಸಲ್ಲಿಸಿದ್ದೇವೆ ಇನ್ನಾದರೂ ನಮಗೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್,ಎಸ್ ನಾಗರಾಜ್ ಇದ್ದರು.