ಆಶ್ರಯ ಮನೆಗಳ ಮಂಜೂರಾತಿ ಪತ್ರ ವಿತರಣೆಯಲ್ಲಿ ಅಕ್ರಮ; ಕ್ರಮವಹಿಸಲು‌ ಒತ್ತಾಯ

ದಾವಣಗೆರೆ.ಮಾ.15; ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ಆಶ್ರಯ ಮನೆಗಳ ಮಂಜೂರಾತಿ ಪತ್ರ ವಿತರಣೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರ ಮಲ್ಲೇಶ್ ದೂರಿದರು.ಗುರುವಾರ ಸುದ್ದಿಗೋಷ್ಠಿ‌ಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜೀವ್ ಗಾಂಧಿ ವಸತಿ ನಿಗಮದ ಅನುಮತಿ ಪಡೆಯದೆ ಹಾಗೂ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರ ಗಮನಕ್ಕೂ ತಾರದೆ ಅಕ್ರಮವಾಗಿ ಎರಡೂ ವರೆ ಸಾವಿರದಷ್ಟು ಮಂಜೂರಾತಿ ಪತ್ರ ನೀಡಲಾಗಿದೆ ಎಂದು ತಿಳಿಸಿದರು.ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದನೆ ನೀಡಿದ ನಿವೇಶನದ ಮಂಜೂರಾತಿ ಪತ್ರಗಳನ್ನು ಅಕ್ರಮವಾಗಿ ವಿತರಿಸಿರುವುದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರದಲ್ಲಿ ಸೂಕ್ತ ತನಿಖೆಗೆ ಆದೇಶ ಜಾರಿಗೊಳಿಸಿ ದ್ದರೂ ಯಾವುದೇ ಕ್ರಮ ತೆಗೆದುಕೊಂಡಿ ರುವುದಿಲ್ಲ ಎಂದು ತಿಳಿಸಿದರು.ಆಶ್ರಯ ಮನೆಗಳ ಮಂಜೂರಾತಿ ಬಗ್ಗೆ ಮಾಹಿತಿ ಕೇಳಿದಾಗ ಮಂಜೂರಾತಿ ಪತ್ರ ನೀಡಿಲ್ಲ ಎಂಬ ಉತ್ತರ ನೀಡಲಾಗಿತ್ತು. ಈಚೆಗೆ ಬಜೆಟ್ ಸಭೆಯಲ್ಲಿ 1600 ಮಂಜೂರಾತಿ ಪತ್ರ ನೀಡಲಾಗಿದೆ ಎಂದು ಹೇಳಿಕೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಎಲ್ಲ ಮಂಜೂರಾತಿ ಪತ್ರಗಳನ್ನು ರದ್ದು ಪಡಿಸುವ ಜೊತೆಗೆ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.