ಆಶ್ರಯ ಮನೆಗಳ ನಿರ್ಮಾಣಕ್ಕೆ ಗುತ್ತಿಗೆದಾರರೇ ಸಿಗುತ್ತಿಲ್ಲ

ಶಿವಮೊಗ್ಗ, ಸೆ.೧: ’ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದೆ. ಫಲಾನುಭವಿಗಳ ಆಯ್ಕೆಯಾಗಿದೆ. ಪ್ರಾರಂಭಿಕ ಹಣ ಕಟ್ಟಿಸಿಕೊಳ್ಳಲಾಗಿದೆ. ಆದರೆ ಮನೆಗಳ ನಿರ್ಮಾಣಕ್ಕೆ ಅರ್ಹ ಗುತ್ತಿಗೆದಾರರೇ ಸಿಗುತ್ತಿಲ್ಲ..!’
ಇದು, ಶಿವಮೊಗ್ಗ ನಗರದ ಹೊರವಲಯ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಗ್ರಾಮಗಳ ಬಳಿ, ಆಶ್ರಯ ಯೋಜನೆಯಡಿ ನಗರ ವ್ಯಾಪ್ತಿಯ ಬಡ ವಸತಿರಹಿತರಿಗೆ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಛಯ (ಅಪಾರ್ಟ್‌ಮೆಂಟ್) ದ ಸದ್ಯದ ಸ್ಥಿತಿ!
ಹೌದು. ಅರ್ಹ ಗುತ್ತಿಗೆದಾರರು ದೊರಕದ ಕಾರಣದಿಂದ, ಇಲ್ಲಿಯವರೆಗೂ ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯಕ್ಕೆ ಚಾಲನೆಯೇ ದೊರಕ್ಕಿಲ್ಲವಾಗಿದೆ! ಇದರಿಂದ ಫಲಾನುಭವಿಗಳು ಮಹಾನಗರ ಪಾಲಿಕೆ ಹಾಗೂ ಆಶ್ರಯ ಯೋಜನೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೆಲವರು ತಾವು ಕಟ್ಟಿದ್ದ ಹಣ ವಾಪಾಸ್ ಪಡೆಯಲು ಮುಂದಾಗಿದ್ದಾರೆ.
ಮೂರು ಬಾರಿ ಟೆಂಡರ್: ಈಗಾಗಲೇ ಮಹಾನಗರ ಪಾಲಿಕೆ ಆಡಳಿತವು, ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಎರಡು ಬಾರಿ ಟೆಂಡರ್ ಆಹ್ವಾನಿಸಿದೆ. ಆದರೆ ಯಾವೊಬ್ಬ ಗುತ್ತಿಗೆದಾರರು ನಿರ್ಮಾಣ ಕಾರ್ಯಕ್ಕೆ ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ನಿಯಮಾನುಸಾರ ಮೂರನೇ ಬಾರಿ ಟೆಂಡರ್ ಆಹ್ವಾನಿಸಿಸಲಾಗಿದೆ ಎಂದು ತಿಳಿದುಬಂದಿದೆ.
ಮಹತ್ವದ ಯೋಜನೆ: ಸರಿಸುಮಾರು ೫ ವರ್ಷಗಳ ಹಿಂದೆ ಈ ಯೋಜನೆ ರೂಪಿಸಲಾಗಿತ್ತು. ಆಧುನಿಕ ತಂತ್ರಜ್ಞಾನ ಬಳಸಿ, ಗುಣಮಟ್ಟದ ಅಪಾರ್ಟ್‌ಮೆಂಟ್ (ಜಿ+೨ ಮಾದರಿ) ನಿರ್ಮಿಸಲು ಮಹಾನಗರ ಪಾಲಿಕೆ ಆಡಳಿತ ನಿರ್ಧರಿಸಿತ್ತು. ಅದರಂತೆ ಸಾರ್ವಜನಿಕರಿಂದ ಎರಡ್ಮೂರು ಬಾರಿ ಅರ್ಜಿ ಆಹ್ವಾನಿಸಿತ್ತು.
ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಈಗಾಗಲೇ ಪ್ರಾರಂಭಿಕ ಹಣ ಕೂಡ ಕಟ್ಟಿಸಿಕೊಳ್ಳಲಾಗಿದೆ. ಪ್ರತಿ ಮನೆಯ ನಿರ್ಮಾಣಕ್ಕೆ, ೫.೮೫ ಲಕ್ಷ ರೂ. ವ್ಯಯಿಸಲಾಗುತ್ತಿದೆ. ಸುಮಾರು ೪೮೩೬ ಮನೆಗಳ ನಿರ್ಮಾಣಕ್ಕೆ ಅನುಮತಿ ದೊರಕಿದೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯಡಿ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ಮೊತ್ತಕ್ಕೆ ಬ್ಯಾಂಕ್ ಮೂಲಕ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ. ಕಡಿಮೆ ಬಡ್ಡಿ ವಿಧಿಸಲಾಗುತ್ತಿದೆ. ಕಂತುಗಳ ಮೂಲಕ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಗಮನಹರಿಸಲಿ: ಎಲ್ಲ ವ್ಯವಸ್ಥೆಯಿದ್ದರೂ, ಗುತ್ತಿಗೆದಾರರ ಅಲಭ್ಯತೆಯಿಂದ ಮನೆಗಳ ನಿರ್ಮಾಣವಾಗದಿರುವುದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಹಂತದಲ್ಲಿ ಯಾವುದೇ ಪರಿಹಾರ ಸಾಧ್ಯವಿಲ್ಲವಾಗಿದೆ. ಸರ್ಕಾರದ ಹಂತದಲ್ಲಿಯೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು, ಕಾಲಮಿತಿಯಲ್ಲಿ ಮನೆಗಳ ನಿರ್ಮಾಣಕ್ಕೆ ಆಡಳಿತ ಮುಂದಾಗಲಿದೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

  • ನೂರಾರು ಕೋಟಿ ರೂ. ಯೋಜನೆ
    ಪ್ರತಿ ಮನೆಯ ನಿರ್ಮಾಣಕ್ಕೆ, ೫.೮೫ ಲಕ್ಷ ರೂ. ವ್ಯಯಿಸಲಾಗುತ್ತಿದೆ. ಒಟ್ಟಾರೆ ೪೮೩೬ ಮನೆಗಳ ನಿರ್ಮಿಸಲಾಗುತ್ತಿದೆ. ನೂರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದಾಗ್ಯೂ ಅರ್ಹ ಗುತ್ತಿಗೆದಾರರು ದೊರಕದಿರುವುದರಿಂದ, ಮನೆಗಳ ನಿರ್ಮಾಣ ಕಾರ್ಯವೇ ಆರಂಭವಾಗದಂತಾಗಿದೆ. ಈ ನಡುವೆ ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗದಿರುವುದರಿಂದ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದ ಶೇ. ೨೫ ರಷ್ಟು ಅನುದಾನವೂ ವಾಪಾಸ್ ಆಗಿದೆ ಎಂದು ಪಾಲಿಕೆ ಮೂಲಗಳು ಹೇಳುತ್ತವೆ.
  • ಮಾದರಿ ಅಪಾರ್ಟ್‌ಮೆಂಟ್ ನಿರ್ಮಾಣ ಚುರುಕು
    ಆಶ್ರಯ ಯೋಜನೆಯಡಿ, ಯಾವ ರೀತಿಯಲ್ಲಿ ಅಪಾರ್ಟ್‌ಮೆಂಟ್‌ಗಳಿರಲಿವೆ? ಎಂಬುವುದರ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ, ೨೪ ಮನೆಗಳನ್ನೊಳಗೊಂಡ ಅಪಾರ್ಟ್‌ಮೆಂಟ್ ನಿರ್ಮಾಣವನ್ನು ನಿರ್ಮಿತಿ ಕೇಂದ್ರದ ಮೂಲಕ ಗೋವಿಂದಾಪುರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲಿಯೇ ಇದರ ಕಾಮಗಾರಿ ಪೂರ್ಣ ಹಂತಕ್ಕೆ ಬರಲಿದೆ.