ಆಶ್ರಯ ನಿವೇಶನ ಹಂಚಿಕೆಗಾಗಿ ಆಗ್ರಹ

ಗದಗ,ಮಾ26: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ವಾರ್ಡ್ ನಂ.7 ರಲ್ಲಿರುವ ದ್ಯಾಂಪುರ ಸಮೀಪ ನಿರ್ಮಸಲಾಗಿರುವ ವಾಜಪೇಯಿ ಆಶ್ರಯ ನಿವೇಶನಗಳನ್ನು ನ್ಯಾಯಬದ್ಧವಾಗಿ ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ನರೇಗಲ್ಲ ಪಟ್ಟಣದ ದಲಿತ ಸಂಘರ್ಷ ಸಮಿತಿಯಿಂದ ಉಪಹಶೀಲ್ದಾರ ಪ್ರಶಾಂತ ಕೆಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈವೇಳೆ ಸಂಘಟನೆ ಸಂಚಾಲಕ ಆನಂದ ನಡವಲಕೇರಿ ಮಾತನಾಡಿ, 2012ರಲ್ಲಿ ನಿರ್ಮಿಸಲಾದ 150 ಮನೆಗಳನ್ನು ಇಂದಿಗೂ ಹಂಚಿಕೆ ಮಾಡಿಲ್ಲ. 2013ರಲ್ಲಿ ಆಯ್ಕೆಯಾದ ಕೆಲವು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ನಂತರ 403 ಮನೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ 150 ಫಲಾನುಭವಿಗಳಿಂದ 30 ಸಾರ ರೂ.ಗಳ ವಂತಿಕೆ ತುಂಬಿಸಿಕೊಳ್ಳಲಾಗಿದೆ. ಆದರೆ, ಈ ಹಿಂದೆ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು ಬೇರೆಯವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜಕೀಯ ನಾಯಕರ ಹಗ್ಗ ಜಗ್ಗಾಟದಲ್ಲಿ ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಈ ಮೊದಲು ಆಯ್ಕೆಯಾದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಅಪ್ಪಣ್ಣ ಗೊರಕಿ, ರಾಜು ಹಳ್ಳದಮನಿ, ಶರಣ ಗೊರಕಿ, ಬಸವರಾಜ ನಡವಲಕೇರಿ, ಸುಭಾಸ ನಡವಲಕೇರಿ, ಭೀಮಪ್ಪ ಹಲಗಿ, ಫಕ್ಕೀರಪ್ಪ ಪಾದಗಟ್ಟಿ, ವಸಂತ ನಡವಲಕೇರಿ ಸೇರಿದಂತೆ ಇತರರಿದ್ದರು.