ಆಶ್ರಯ ಕಾಲೋನಿ : ಸರ್ವೇ ನಂ.572 – ಅತಿಕ್ರಮಣ

ಅಕ್ರಮ ಶೆಡ್ – ಜೋಪಡಿ ತೆರವಿಗೆ ಆದೇಶ
ರಾಯಚೂರು.ನ.22- ನಗರದ ಆಶ್ರಯ ಕಾಲೋನಿಯಲ್ಲಿ ಐದು ಸರ್ವೇ ನಂ.ಗಳಲ್ಲಿ ಫಲಾನುಭವಿ ಹೊರತು ಪಡಿಸಿ, ಖಾಲಿಯಿರುವ ಸ್ಥಳಗಳಲ್ಲಿ ಅಕ್ರಮವಾಗಿ ಗುಡಿಸಲು ಮತ್ತು ಶೆಡ್ ಹಾಕುತ್ತಿರುವವರ ವಿರುದ್ಧ ತೆರವಿನ ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ನ.06 ರಂದು ನಗರಸಭೆ ಪೌರಾಯುಕ್ತರು ಹೊರಡಿಸಿದ ಆದೇಶದಲ್ಲಿ ಏಳು ದಿನಗಳಲ್ಲಿ ಸ್ವಯಂ ತೆರವು ಕಾರ್ಯಾಚರಣೆ ಕೈಗೊಳ್ಳದಿದ್ದರೇ, ಕಾನೂನು ಕ್ರಮದೊಂದಿಗೆ ಗುಡಿಸಲು ಮತ್ತು ಶೆಡ್ ಕಡ್ಡಾಯ ತೆರವುಗೊಳಿಸುವ ಪ್ರಕಟಣೆ ನೀ‌ಡಲಾಗಿತ್ತು. 1991-92 ರಲ್ಲಿ ಆಶ್ರಯ ಕಾಲೋನಿಯಲ್ಲಿ ನಗರಸಭೆಯಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಸರ್ವೇ ನಂ.570, 572, 573, 574, 558, 556/ 1, 2, 3 ಮತ್ತು 4 ರಲ್ಲಿ ಈಗಾಗಲೇ ಹಕ್ಕು ಪತ್ರ ಪಡೆದ ಫಲಾನುಭವಿಗಳನ್ನು ಹೊರತು ಪಡಿಸಿ, ಹಲವಾರು ಜನ ಅಕ್ರಮವಾಗಿ ಗುಡಿಸಲು ಮತ್ತು ಟಿನ್ ಶೆಡ್ ನಿರ್ಮಿಸಿರುವುದು ಕಂಡು ಬಂದಿರುತ್ತದೆ.
ಈ ಕುರಿತು ನಗರಸಭೆ ಕಛೇರಿಯ ತಾಂತ್ರಿಕ ವಿಭಾಗ ಸ್ಥಳ ಪರಿಶೀಲನೆ ಮಾಡಿ, ಇಲ್ಲಿವರೆಗೂ ನಿವೇಶನ ಹಂಚಿಕೆ ಕುರಿತು ದಾಖಲೆ ಸಲ್ಲಿಸಲು ಸೂಚಿಸಿದ್ದರೂ, ಸಹ ಯಾವುದೇ ದಾಖಲೆ ಸಲ್ಲಿಸದೇ, ಅನಧೀಕೃತವಾಗಿ ವಾಸಿಸುತ್ತಿರುವುದು ಕಂಡು ಬಂದಿದೆಂದು ಪೌರಾಯುಕ್ತರು ತಮ್ಮ ನೋಟೀಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸರ್ವೇ ನಂ.570, 572, 573, 574 ಮತ್ತು 558, 556/ 1, 2, 3, 4 ರಲ್ಲಿ ಅಕ್ರಮವಾಗಿ ಗುಡಿಸಲು ಮತ್ತು ಟಿನ್ ಶೆಡ್ ಹಾಕಿದವರಿಗೆ ಬಹಿರಂಗವಾಗಿ ಪ್ರಕಟಣೆ ಮೂಲಕ ಸೂಚಿಸಲಾಗಿದೆ.
ಏಳು ದಿನಗಳಲ್ಲಿ ದಾಖಲೆ ನೀಡುವಂತೆ ಕೇಳಲಾಗಿದೆ. ಆದರೆ, ಇಲ್ಲಿವರೆಗೂ ಯಾವುದೇ ದಾಖಲಾತಿ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಇವುಗಳ ತೆರವಿಗೆ ಜಿಲ್ಲಾಧಿಕಾರಿ ನ.21 ರಂದು ಮತ್ತೊಂದು ಆದೇಶ ನೀಡಿದ್ದಾರೆ. ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯ ಶೆಡ್ ಮತ್ತು ಕಟ್ಟಡ ಪರಿಶೀಲಿಸಿದರು. ಇದರ ಬೆನ್ನ ಹಿಂದೆಯೇ ಜಿಲ್ಲಾಧಿಕಾರಿ ನ.20 ರಂದು ಅಕ್ರಮ ಕಟ್ಟಡ ತೆರವಿಗೆ ಆದೇಶಿಸಿದ್ದಾರೆ. ಸರ್ವೇ ನಂ.572 ರಲ್ಲಿ ಈಗಾಗಲೇ ಹಂಚಿಕೆಯಾದ ಫಲಾನುಭವಿಗಳ ನಿವೇಶನ ಹೊರತು ಪಡಿಸಿ, ಅಕ್ರಮವಾಗಿ ಕಟ್ಟಿದ ಶೆಡ್ ಮತ್ತು ಜೋಪಡಿಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಅಕ್ರಮವಾಗಿ ನಿರ್ಮಿಸಿದ ಶೆಡ್‌ಗಳಿಗೆ ಮಾತ್ರ ಜಿಲ್ಲಾಧಿಕಾರಿಗಳ ಆದೇಶ ಅನ್ವಯಿಸುತ್ತದೆ ಎನ್ನುವುದು ನಗರಸಭೆ ಅಧಿಕಾರಿಗಳ ಸ್ಪಷ್ಟನೆಯಾಗಿದೆ.