ಆಶ್ರಯದಾತರ ತಿರಸ್ಕಾರ ಒಪ್ಪಂದಕ್ಕೆ ಇಂದು ಅಮೆರಿಕಾ-ಕೆನಡಾ ಸಹಿ

ಒಟ್ಟಾವಾ (ಕೆನಡಾ), ಮಾ.೨೪- ಅನಧಿಕೃತ ಗಡಿ ಪ್ರದೇಶಗಳ ಮೂಲಕ ಬಂದು ಆಶ್ರಯ ಪಡೆಯುವ ನಾಗರಿಕರನ್ನು ತಿರಸ್ಕರಿಸುವ ಸಲುವಾಗಿ ಅಮೆರಿಕಾ ಹಾಗೂ ಕೆನಡಾ ಒಪ್ಪಂದ ಏರ್ಪಡಲಿದೆ. ಶುಕ್ರವಾರ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಒಟ್ಟಾವಾಗೆ ಆಗಮಿಸಲಿದ್ದು, ಇಲ್ಲಿ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ನಡುವೆ ಮಹತ್ವಪೂರ್ಣ ಒಪ್ಪಂದಕ್ಕೆ ಅಂಕಿತ ಬೀಳಲಿದೆ.
ಇತ್ತೀಚಿಗಿನ ದಿನಗಳಲ್ಲಿ ಕೆನಡಾದಿಂದ ಅಮೆರಿಕಾಗೆ ಆಶ್ರಯ ಕೋರಿ ಬರುವ ನಾಗರಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ. ಅದರಲ್ಲೂ ನ್ಯೂಯಾರ್ಕ್ ರಾಜ್ಯ ಹಾಗೂ ಕೆನಡಾದ ಕ್ವೆಬೆಕ್ ಪ್ರಾಂತ್ಯದ ನಡುವಿನ ಅನಧಿಕೃತ ಕ್ರಾಸಿಂಗ್ ರೋಕ್ಸ್‌ಹ್ಯಾಮ್ ರಸ್ತೆಯಲ್ಲಿ ವಲಸೆಗಾರರ ಬರುವುದನ್ನು ಮಿತಿಗೊಳಿಸಲು ನಿರ್ಧರಿಸಲಾಗಿದೆ. ಈ ಒಪ್ಪಂದದ ಪರಿಣಾಮ ಅಮೆರಿಕಾ ಹಾಗೂ ಕೆನಡಾ ಗಡಿ ಪ್ರದೇಶದಲ್ಲಿರುವ ಅಧಿಕಾರಿಗಳಿಗೆ ಯಾವುದೇ ದಿಕ್ಕಿನತ್ತ ಆಶ್ರಯ ಕೋರಿ ಬರುವ ನಾಗರಿಕರನ್ನು ಹಿಂದಕ್ಕೆ ಕಳುಹಿಸಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ. ಇನ್ನು ಒಪ್ಪಂದದ ಪ್ರಕಾರ ದಕ್ಷಿಣ ಮತ್ತು ಮಧ್ಯ ಅಮೆರಿಕಾದಲ್ಲಿ ಕಿರುಕುಳ ಹಾಗೂ ಹಿಂಸಾಚಾರದಿಂದ ಪಲಾಯನ ಮಾಡುವ ೧೫ ಸಾವಿರ ವಲಸಿಗರಿಗೆ ಕೆನಡಾ ಹೊಸ ನಿರಾಶ್ರಿತರ ಯೋಜನೆಗಳನ್ನು ರಚಿಸಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಮೆರಿಕಾ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇನ್ನು ಜೋ ಬೈಡೆನ್ ಅವರು ಶುಕ್ರವಾರ ಕೆನಡಾದ ಒಟ್ಟಾವಾದಲ್ಲಿ ೨೪ ಗಂಟೆಗಳ ಕಾಲ ಟ್ರೂಡೊ ಅವರೊಂದಿಗೆ ಆರ್ಥಿಕ, ವ್ಯಾಪಾರ ಮತ್ತು ವಲಸೆ ಸಮಸ್ಯೆಗಳ ಕುರಿತ ಮಾತನಾಡಲಿದ್ದಾರೆ. ಅದರಂತೆ ಯುಎಸ್‌ಗೆ ಹಿಂದಿರುಗುವ ಮೊದಲು ವಲಸೆ ಒಪ್ಪಂದವನ್ನು ಘೋಷಿಸುವ ನಿರೀಕ್ಷೆಯಿದೆ. ಇನ್ನು ಈ ಒಪ್ಪಂದವು ಅಮೆರಿಕಾ ಹಾಗೂ ಕೆನಡಾ ನಡುವಿನ ೨೦೦೪ರ ಸುರಕ್ಷಿತ ತೃತೀಯ ದೇಶ (ಸೇಫ್ ಥರ್ಡ್ ಕಂಟ್ರಿ) ಒಪ್ಪಂದದ ತಿದ್ದುಪಡಿಯಾಗಿದೆ. ಇದು ಅಮೆರಿಕಾ ಅಥವಾ ಕೆನಡಾ ನಾಗರಿಕರಾಗಿರಲಿ ಅವರು ತಲುಪುವ ಮೊದಲ ಸುರಕ್ಷಿತ ದೇಶದಲ್ಲಿ ಆಶ್ರಯ ಹಕ್ಕು ಪಡೆಯಲು ಅಗತ್ಯ ಎಂಬುದನ್ನು ತಿಳಿಸುತ್ತದೆ. ಅಲ್ಲದೆ ತಿದ್ದುಪಡಿಯಿಂದಾಗಿ ಸುರಕ್ಷಿತ ಮೂರನೇ ದೇಶದ ಒಪ್ಪಂದದ ಲೋಪದೋಷಗಳನ್ನು ಸರಿಪಡಿಸಲಿದೆ. ಅಲ್ಲದೆ ಇದು ಕೆನಡಾದಲ್ಲಿನ ಅನಧಿಕೃತ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಗಡಿ ದಾಟುವವರನ್ನು ದೂರವಿಡುವುದನ್ನು ತಡೆಯಲಿದೆ.