ಆಶ್ರಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವಿಲ್ಲದೆ ಮಕ್ಕಳು ಕೂಲಿಗೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.07:- ರಾಜ್ಯದ ಆಶ್ರಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕದ ಕಾರಣ ಶಿಕ್ಷಣ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದಶಿ ಶೈಲೇಂದ್ರಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 116 ಆಶ್ರಮ ಶಾಲೆಗಳಿದ್ದು, ಇವುಗಳಲ್ಲಿ ಅರಣ್ಯ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಬೆಟ್ಟಕುರುಬ, ಯವರ, ಸೋಲಿಗ, ಹಕ್ಕಿಪಿಕ್ಕಿ, ಡೋಂಗ್ರಿಗೆರಾಸಿಯಾ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇವುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲದ ಕಾರಣ ಇವರಲ್ಲಿ ಅನೇಕರು ಶಿಕ್ಷಣ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುವಂತಾಗಿದೆ ಎಂದರು.
ಜಿಲ್ಲಾ ವ್ಯಾಪ್ತಿಯ ಎಚ್.ಡಿ. ಕೋಟೆಯಲ್ಲಿ 10 ಆಶ್ರಮಶಾಲೆ, ಹುಣಸೂರು ತಾಲೂಕಿನಲ್ಲಿ ಆರು, ಪಿರಿಯಾಪಟ್ಟಣ ತಾಲೂಕಿನಲ್ಲಿ ಮೂರು, ನಂಜನಗೂಡು ತಾಲೂಕಿನಲ್ಲಿ ಹತ್ತು ಆಶ್ರಮ ಶಾಲೆಗಳಿವೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿಯೂ 2100 ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಇದೇ ವೇಳೆ, 2005 ರಿಂದ 2024 ರ ನಡುವೆ ಈ ಸಮುದಾಯದ 3420 ಮಕ್ಕಳು ಕೂಲಿ ಕಾರ್ಮಿಕರಾಗಿದ್ದಾರೆ. ಇವರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸದಿರುವುದು, ಕನಿಷ್ಠ ದ್ವಿತೀಯ ಪಿಯುಸಿ ತನಕ ಉಚಿತ ಕಡ್ಡಾಯ ಶಿಕ್ಷಣ ನೀಡುವ ಸೌಲಭ್ಯವನ್ನು ಈ ಆಶ್ರಮದ ಶಾಲೆಗಳಲ್ಲೇ ಒದಗಿಸುವುದು ಸಹಾ ಕಾರಣವಾಗಿದೆ. ಆದ್ದರಿಂದ ಡಿಸಿ, ಜಿಪಂ ಸಿಇಒ, ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.