ಆಶೆಯರಿಗೆ ನಿಖಿಲ್ ಸಹಾಯ ಹಸ್ತ

ಬೆಂಗಳೂರು,ಜೂ. ೩- ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದಾರೆ.
ರಾಮನಗರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿಂದು ನಿಖಿಲ್‌ಕುಮಾರ ಸ್ವಾಮಿ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಫ್ ನರ್ಸ್‌ಗಳಿಗೆ ಆರ್ಥಿಕ ನೆರವು ನೀಡಿ, ಇದರ ಜತೆಗೆ ನೆಬೊಲೈಜೇಷನ್ ಯಂತ್ರಗಳನ್ನು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇವರೆಲ್ಲ ನಿಜವಾದ ಕೋವಿಡ್ ವಾರಿಯರ್ಸ್ ಇವರಿಗೆ ಕೈಲಾದ ಸಹಾಯ ಮಾಡಬೇಕು ಎಂದು ಅಂದುಕೊಂಡಿದ್ದೆ. ಇಂದು ಕಾಲ ಕೂಡಿ ಬಂದಿದೆ ಎಂದರು.
ಕೋವಿಡ್‌ನ ಈ ಸಂದರ್ಭದಲ್ಲಿ ಹಲವು ಆಶಾ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರದಿಂದ ಪರಿಹಾರ ಮಾತ್ರ ಎಲ್ಲರಿಗೂ ಸಿಕ್ಕಿಲ್ಲ ಎಂದು ಅವರು ದೂರಿದರು.
ಮುಂದಿನ ದಿನಗಳಲ್ಲಿ ಮೆಡಿಕಲ್ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು, ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ನಿರಂತರವಾಗಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ರಾಮನಗರ-ಚೆನ್ನಪಟ್ಟಣ ನಮ್ಮ ಎರಡೂ ಕಣ್ಣುಗಳಿದ್ದಂತೆ, ಚೆನ್ನಪಟ್ಟಣದಲ್ಲೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವುದಾಗಿ ಅವರು ಹೇಳಿದರು.