ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.20: ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನವು ಆರ್‍ಸಿಎಚ್ ಪೋರ್ಟಲ್‍ಗೆ ಲಿಂಕ್ ಮಾಡಿರುವುದರಿಂದ ಅವರಿಗೆ ವೇತನ ಸಂಪೂರ್ಣವಾಗಿ ಸಿಗದೇ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿರುವ ಹಾಗೂ ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ಮೊಬೈಲ್ ಆಧಾರಿತ ಕೆಲಸ ನೀಡುವುದನ್ನು ಕೈಬಿಡುವಂತೆ, ಎನ್‍ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಳೆ ಪ್ರೋತ್ಸಾಹಧನ ನೀಡದಿರುವ ಮತ್ತು ಆಶಾಗಳಲ್ಲದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇತರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ನಗರದ ಗಾಂಧಿಭವನದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಣ್ಯರು, ಆರ್‍ಸಿಹೆಚ್ (ಆಶಾ ನಿಧಿ) ಪೋರ್ಟಲ್‍ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಕೆಲವು ಕಾಂಪೋನೆಂಟ್‍ಗಳಿಗೆ ಯಾವುದೇ ಪ್ರೋತ್ಸಾಹಧನ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ. ಹಲವಾರು ಆಶಾಗಳಿಗೆ 3-4 ತಿಂಗಳು ನಿಗದಿತ ಗೌರವಧನ ಬಂದಿರುವುದಿಲ್ಲ. ಸಮಸ್ಯೆ ಪರಿಹಾರಕ್ಕೆ ಪದೇ ಪದೇ ಕಛೇರಿಗೆ ಅಲೆದರೂ ಹಣ ಬಂದಿರುವುದಿಲ್ಲ. ಅಲ್ಲದೇ ಇವರಿಗೆ ಇಲಾಖೆಯಿಂದ ಮೊಬೈಲ್ ಹಾಗೂ ಡಾಟಾ ನೀಡದೇ ಇದ್ದರೂ ಮೊಬೈಲ್ ಆಧಾರಿತ ಹತ್ತಾರು ಚಟುವಟಿಕೆಗಗಳನ್ನು ಮಾಡಿಸಲಾಗುತ್ತಿದೆ. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಇಲ್ಲ. ಇದರ ಮಧ್ಯೆ ಅವರನ್ನು ದೂರದ ಪ್ರದೇಶಗಳಿಗೆ ಹಲವಾರು ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ.
ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ 3 ತಿಂಗಳಿಗೊಮ್ಮೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಶಾ ಕುಂದುಕೊರತೆ ಸಭೆಯನ್ನು ಸಂಘದ ಮುಖಂಡರೊಂದಿಗೆ ನಡೆಸಬೇಕೆಂದು ಸರ್ಕಾರದ ಆದೇಶವಿದ್ದರೂ ಎಷ್ಟೋ ವರ್ಷಗಳಾದರೂ ಸಭೆ ಕರೆದಿಲ್ಲದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಆದ್ದರಿಂದ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೋರುತ್ತೇವೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಆಶಾ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎಂ.ದೇವದಾಸ್, ಕಾರ್ಯದರ್ಶಿ ಡಾ.ಪ್ರಮೋದ್, ಅಧ್ಯಕ್ಷತೆಯನ್ನು ಸಂಘದ ಗೌರವ ಅಧ್ಯಕ್ಷರಾದ ಶಾಂತಾ ವಹಿಸಿದ್ದರು. ಗೀತಾ, ರೇಷ್ಮಾ,  ಜಲಜಾಕ್ಷಿ , ರಾಮಕ್ಕ ಮುಂತಾದವರು ಇದ್ದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.