ಆಶಾ ಕಾರ್‍ಯಕರ್ತೆಯರ ವಿಧಾನಸೌಧ ಚಲೋ

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಹಾಗೂ ಕಾರ್ಯಕರ್ತೆಯರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು, ಫೆ.೧೩-ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೫ ಸಾವಿರ ವೇತನ ನಿಗದಿಗೊಳಿಸಬೇಕು. ಆಶಾಗಳ ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ವಿಧಾನಸೌಧ ಚಲೋ ನಡೆಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ನಗರದಲ್ಲಿ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಆಶಾ ಕಾರ್ಯಕರ್ತೆಯರು ಇಂದಿನಿಂದ ಎರಡು ದಿನಗಳ ಕಾಲ ವಿಧಾನಸೌಧ ಚಲೋ ಹೋರಾಟ ನಡೆಯಲಿದೆ ಎಂದು ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕನಿ? ೧೫ ಸಾವಿರ ವೇತನ ನಿಗದಿ ಮಾಡಬೇಕು. ಆಶಾಗಳನ್ನು ವಂಚಿಸುತ್ತಿರುವ ಆರ್‌ಸಿಎಚ್ ಪೋರ್ಟಲ್‌ನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡೀಲಿಂಕ್ ಮಾಡಬೇಕು. ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಹಾಗೂ ಮೊಬೈಲ್ ಆಧರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಬಾರದು. ಹಲವು ವಷಗಳಿಂದ ಬಾಕಿಯಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಪ್ರತಿಭಟನಾಕಾರರು ಹೇಳಿದರು.
೮ ವಷಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ನೀಡುವ ವೇತನ ಮಾದರಿ ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಆರ್‌ಸಿಎಚ್ ಪೋರ್ಟಲ್‌ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟ್ಟಕ್ಕೆ ಒಳಗಾಗಿದ್ದಾರೆ. ಆಶಾಗಳು ಕಷ್ಟಪಟ್ಟು ದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ.
ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟ್ಟು ಬಾರಿ ಪ್ರತಿಭಟನೆ ನಡೆಸಿದೆ. ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆಗಳನ್ನ ಸಹ ಸಂಘವು ನೀಡಿದೆ. ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿ ಧೋರಣೆನ್ನು ಮುಂದುವರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.