ಆಶಾ ಕಾರ್ಯಕರ್ತೆಯರು ಕೊರೋನಾ ಸಂಬಂಧಿತ ಕೆಲಸ ಮಾಡುವುದಿಲ್ಲ

ಮೈಸೂರು. ಮೇ.18: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಟಿ.ನರಸೀಪುರ ತಾಲೂಕು ಸಮಿತಿ ಆಶಾ ಕಾರ್ಯಕರ್ತೆಯರ ಆರೋಗ್ಯ, ಭದ್ರತೆ ಈ ಕುರಿತು ಸರಿಯಾದ ತೀರ್ಮಾನ ತೆಗೆದುಕೊಂಡು ನಿರ್ದಿಷ್ಟ ಕ್ರಮ ಜಾರಿಗೊಳಿಸುವವರೆಗೂ ಕೊರೋನಾ ಸಂಬಂಧಿತ ಕೆಲಸ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಈ ಕುರಿತು ಸಂಘ ಸ್ಪಷ್ಟೀಕರಣ ನೀಡಿದ್ದು, ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಭದ್ರತೆ ನೀಡಲು ಆಗ್ರಹಿಸಿದ್ದಾರೆ. ಟಿ.ನರಸೀಪುರ ತಾಲೂಕಿನ ಬನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯೋರ್ವರು ತನ್ನ ಗಂಡನಿಗೆ ಹುಷಾರಿಲ್ಲದೆ ಇದ್ದು, ಇದ್ದಕ್ಕಿದ್ದಂತೆಯೇ ಜ್ವರ ತೀವ್ರವಾಗಿದ್ದರಿಂದ ಆತಂಕಗೊಂಡು ಮೈಸೂರಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಬಂದು ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟಿವ್ ಎಂದು ಗೊತ್ತಾಯಿತು.
ನಂತರ ಬೇರೆ ಅನಾರೋಗ್ಯವೂ ಇದ್ದು ರೋಗಿಯ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಆಸ್ಪತ್ರೆಗೆ ದಾಖಲಾದರೆ ಉತ್ತಮವೆಂದು ಅವರು ಸಲಹೆ ನೀಡಿದರು. ಪ್ರಾರಂಭದಲ್ಲಿ ಒಂದು ಲಕ್ಷ ಹಣ ಸಂದಾಯ ಮಾಡಿ ಪ್ರತಿದಿನ 15,000 ನೀಡುವಿರಾದರೆ ಅಡ್ಮಿಶನ್ ಮಾಡಿಸಿಕೊಳ್ಳುವುದಾಗಿ ಅವರು ಹೇಳಿದರು. ಕಳೆದ ಎರಡು ತಿಂಗಳಿನಿಂದಲೂ ದುಡಿಮೆಯ ಪ್ರತಿಫಲ-ಪೆÇ್ರೀತ್ಸಾಹ ಧನ ಕೈಗೆ ಸಿಗದೇ ಇದ್ದು ಜೀವನ ನಿರ್ವಹಿಸಲು ಒದ್ದಾಡುತ್ತಿರುವ ಈ ಪರಿಸ್ಥಿತಿಯಲ್ಲಿ ಇದು ತಮ್ಮ ಕೈಲಾಗದ್ದು ಎಂದು ಆಕೆಯ ಜೊತೆಗಾತಿ ಆಶಾ ಕಾರ್ಯಕರ್ತೆಯೋರ್ವರು ಟಿ.ನರಸೀಪುರ ತಾಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ಮೈಸೂರಿನ ಕೋವಿಡ್ ವಾರ್ ರೂಂ ಗೆ ಸಂಪರ್ಕಿಸಲು ತಿಳಿಸಿದರು. ಅಲ್ಲಿಂದ ಕೋವಿಡ್ ವಾರ್ ರೂಂಗೆ ಹೋದಾಗ ನೀವು ಈ ರೀತಿ ನೇರವಾಗಿ ಬರುವುದಕ್ಕೆ ಸಾಧ್ಯವಿಲ್ಲ.
ತುಳಸಿದಾಸಪ್ಪ ಆಸ್ಪತ್ರೆಗೆ ಹೋಗಿ ಅಲ್ಲಿಂದ ನಮಗೆ ಮಾಹಿತಿ ಬರುತ್ತದೆ. ಆ ಮಾಹಿತಿಯನ್ನು ನಿಮ್ಮ ಮೊಬೈಲ್ ಗೆ ಮೆಸೇಜ್ ಮಾಡುತ್ತೇವೆ ಆವಾಗ ಬನ್ನಿ ಎಂದಿದ್ದರು. ಅದರಂತೆ ಮೈಸೂರಿನ ತುಳಸಿದಾಸಪ್ಪ ಆಸ್ಪತ್ರೆಗೆ ಬಂದಾಗ ಅಲ್ಲಿ ಎಲ್ಲವನ್ನೂ ಪರೀಕ್ಷಿಸಿ ಆಕ್ಸಿಜನ್ ಪ್ರಮಾಣ 84-85ರಷ್ಟು ಇದ್ದು ಇನ್ನೂ ಗಂಭೀರ ಅನಾರೋಗ್ಯ ಸಮಸ್ಯೆ ಇದ್ದರೂ ಕೂಡ ಅವರನ್ನು ಹೋಮ್ ಐಸೋಲೇಷನ್ ಗೆ ಹೇಳಿದ್ದರು. ಅದರಂತೆ ವಾಪಸ್ ಹೋಗಿ ಇಡೀ ರಾತ್ರಿ ಕಷ್ಟದಿಂದ ಕಾಲ ಕಳೆದಿರುತ್ತಾರೆ. ತಡೆಯಲಾಗದೆ ಪುನಃ ಮೈಸೂರಿಗೆ ಹೋದರೆ ಪ್ರಯೋಜನವಿಲ್ಲವೆಂದು ಮುಂಜಾವಿನಲ್ಲಿಯೇ ಮಂಡ್ಯ ಜಿಲ್ಲಾಸ್ಪತ್ರೆಗೆ ಹೋಗಿದ್ದು ಅಲ್ಲಿ ಕೇಸು ಗಂಭೀರವಾಗಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಲು ತಿಳಿಸಿದ್ದರು. ಕೋವಿಡ್ ವಾರ್ ರೂಂ ಅವರ ಬಳಿ ಕೇಳಿ ಅಲ್ಲಿ ಕೇಳಿ ಇಲ್ಲಿ ಕೇಳಿ ಅಂತ ಎಲ್ಲಿಯೂ ಬೆಡ್ ಸಿಗದೆ ಟಿ.ನರಸೀಪುರ ಆರೋಗ್ಯಾಧಿಕಾರಿಗಳು ಈಗ ಬೆಡ್ ಖಾಲಿಯಾಗಿದೆ ಬನ್ನಿ ಎಂದು ಕರೆದಾಗ ಹೋಗುವಂತಾಯಿತು.
ಕೊರೋನಾ ಹೆಚ್ಚುತ್ತಿದ್ದು ಆಶಾ ಕಾರ್ಯಕರ್ತೆಯರ ಕುಟುಂಬದವರೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಬೆಡ್ ಕಾದಿರಿಸಬೇಕೆಂಬ ಆದೇಶವಿದ್ದರೂ ಬೆಡ್ ಕಾದಿರಿಸಲಾಗಿಲ್ಲ. ಮೈಸೂರು ಜಿಲ್ಲಾಡಳಿತ ಕೊರೋನಾ ವಾರಿಯರ್ಸ್ ಎಂದೇ ಹೆಸರಾದ ಆಶಾ ಕಾರ್ಯಕರ್ತೆಯರ ಆರೋಗ್ಯ ಭದ್ರತೆ ಈ ಕುರಿತು ಸರಿಯಾದ ತೀರ್ಮಾನ ತೆಗೆದುಕೊಂಡು ನಿರ್ದಿಷ್ಟ ಕ್ರಮ ಜಾರಿಗೊಳಿಸುವವರೆಗೂ ಆಶಾ ಕಾರ್ಯಕರ್ತೆಯರಾದ ನಾವು ಕೊರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದು, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.