ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಣೆ

ತಿ.ನರಸೀಪುರ.ಏ.23: ಪಟ್ಟಣದ ತಾಲ್ಲೂಕು ವೈದ್ಯಾಧಿಕಾರಿಗಳ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಧೆಯಿಂದ ಓರೆಕಲ್ ಸಹಾಯದೊಂದಿಗೆ ತಾಲ್ಲೂಕಿನ 248 ಆಶಾ ಕಾರ್ಯಕರ್ತೆರಿಗೆ ಅಗತ್ಯ ಆರೋಗ್ಯ ಮತ್ತು ಶುಚಿತ್ವ ಕಿಟ್‍ಗಳನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಮೇಶ್, ಪುರಸಭೆ ಅಧ್ಯಕ್ಷ ಸೋಮು ವಿತರಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹ್ಯಾಕನೂರು ಉಮೇಶ್ ಆಶಾ ಕಾರ್ಯಕರ್ತೆಯರು ನಿಜವಾದ ಕೊರೊನಾ ಸೈನಿಕರಿದ್ದಂತೆ. ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಧೆ ಮತ್ತು ಓರೆಕಲ್ ನಿಂದ ಅಗತ್ಯವಾದ ಕೋವಿಡ್-19 ಆರೋಗ್ಯ ಪರಿಕರಗಳನ್ನು 36,000 ಆಶಾ ಕಾರ್ಯಕರ್ತೆರಿಗೆ ವಿತರಣೆ ಮಾಡುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ್ಯಂತ ಹಮ್ಮಿಕೊಂಡಿರುವುದು ಹೆಮ್ಮೆ ಪಡುವ ವಿಷಯವಾಗಿದೆ ಇವರಿಗೆ ತಾಲ್ಲೂಕಿನ ಜನ ಅಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಎನ್.ಸೋಮು ಮಾತನಾಡಿ, ಸಮರ್ಥನಂ ಸಂಸ್ಥೆ ತಾಲ್ಲೂಕಿನ 248 ಆಶಾ ಕಾರ್ಯಕರ್ತೆಯರು ಸೇರಿದಂತೆ ಮೈಸೂರು ಜಿಲ್ಲೆಯ 1822, ಮಂಡ್ಯದ 1367 ಕೊಡಗು 476, ಮತ್ತು ಚಾಮರಾಜನಗರದ 796 ಆಶಾ ಕಾರ್ಯಕರ್ತೆರಿಗೆ ಅಗತ್ಯವಾದ ಆರೋಗ್ಯ ಪರಿಕರಗಳನ್ನು ವಿತರಿಸಲಾಗಿದೆ ಇದೊಂದು ಸಾಮಾನ್ಯ ವಿಷಯವಲ್ಲ, ಸಮರ್ಥನಂ ಅಂಗವಿಕಲರ ಸಂಸ್ಧೆಯು ಇಲ್ಲಿಯವರೆಗೂ 45 ಕೋಟಿ ರೂ.ಗಳ ಮೌಲ್ಯದ ಅಗತ್ಯವಾದ ಆರೋಗ್ಯ ಪರಿಕರಗಳನ್ನು ವೈದ್ಯರು, ಪೆÇಲೀಸರು, ಪೌರಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರಿಗೆ ವಿತರಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಧೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ ಸಮರ್ಥನಂ ಸಂಸ್ಥೆಯು ವಿಕಲಚೇತನರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬಡ ಕುಟುಂಬಗಳಿಗೆ ರ್ಯಾಫಿಡ್ ರೆಸ್ಪಾನ್ಸ್ ರಿಲೀಫ್ ಕಿಟ್, ಮದ್ಯಾಹ್ನ ಮತ್ತು ರಾತ್ರಿ ಬಿಸಿ ಊಟದ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್ ಗಳು, ಮಾಸ್ಕ್ ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ತಮ್ಮ ಒಂದು ದಿನದ ವೇತನವನ್ನು (5ಲಕ್ಷ) ಸನ್ಮಾನ್ಯ ಮುಖ್ಯ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಲಾಗಿದೆ.
ಸಮರ್ಥನಂ ಅಂಗವಿಕಲರ ಸಂಸ್ಧೆಯು 1997 ರಿಂದ ಭಾರತದಲ್ಲಿ ವಿಕಲಚೇತನರು ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರು ವೈಯಕ್ತಿಕ ಸ್ವಾವಲಂಬನೆಯನ್ನು ಸಾಧಿಸುವುದಾಗಿದೆ ಮತ್ತು ಸಮಾಜದಲ್ಲಿ ತಮ್ಮದೇ ಆಗಿರುವ ಪ್ರಮುಖ ಹೆಜ್ಜೆಯನ್ನು ಇಡುವಲ್ಲಿ ಸಹಾಯ ಮಾಡುವತ್ತ ಪ್ರಮುಖ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಬಿ.ಜೆ.ಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೋಹಟ್ಟಿ ಬಸವರಾಜು, ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಡಾ. ಪುಟ್ಟಸ್ವಾಮಿ, ಭಾರತೀಯ ಸಮಾಜ ಕಾರ್ಯ ಸಂಸ್ಥೆಯ ಸಿದ್ದರೂಡ್ ಆರ್ ಶೇರೆವಾಡ್, ಅಖಿತ್‍ಕುಮಾರ್, ತಾಲ್ಲೂಕು ಟಿ.ಬಿ ಕಾರ್ಯಕ್ರಮ ಸಂಯೋಜಕ ಪವನ್ ಕುಮಾರ್, ಆಶಾ ಸಂಯೋಜಕಿ ರೂಪ ಮತ್ತಿತರರು ಭಾಗವಹಿಸಿದ್ದರು.