ಆಶಾ ಕಾರ್ಯಕರ್ತರು, ದಾದಿಯರಿಗೆ ಶಾಸಕರಿಂದ ಆಹಾರ ಕಿಟ್ ವಿತರಣೆ

ಮೈಸೂರು: ಜೂ.07: ಇಂದು ಬೆಳಗ್ಗೆ ಶಾಸಕರಾದ ಎಸ್.ಎ ರಾಮದಾಸ್ ರವರ ನೇತೃತ್ವದಲ್ಲಿ ಕೋವೀಡ್ ಮಹಾಮಾರಿಯ ವಿಷಯಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ದಾದಿಯರು ಇವರ ಸೇವೆಯನ್ನು ಅಭಿನಂದಿಸಿ ಮೈಸೂರನ್ನು ಸಂರಕ್ಷಿಸಲು ಇವರೆಲ್ಲರ ಸಹಕಾರ ಅತ್ಯಮೂಲ್ಯವಾಗಿದ್ದರಿಂದ ಇವರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ನೆರೆವೇರಿಸಿ ಮಾತನಾಡಿದ ಮಾನ್ಯ ಶಾಸಕರು ಇಡೀ ದೇಶದಲ್ಲಿ ಆರೋಗ್ಯದ ದೃಷ್ಟಿಯಿಂದ ಓರ್ವ ಸೇನಾನಿಯಾಗಿ ನಿರಂತರ ಕೆಲ್ಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಆಹಾರ ಕಿಟ್ ನೀಡಬೇಕೆಂದು ಅನ್ನಿಸಿತು. ಕೋವಿಡ್ ಪಾಸಿಟಿವ್ ಇದ್ದವರ ಮನೆ ಬಾಗಿಲಿಗೆ ಔಷಧಿ ನೀಡುವ ಕಾರ್ಯವನ್ನು ಹಾಗೂ ಅವರ ಯೋಗಕ್ಷೇಮ ವಿಚಾರಣೆ ಮಾಡುವ ಕೆಲಸ ಮಾಡುತ್ತಿದ್ದೀರಿ. ಅಷ್ಟೇ ಅಲ್ಲದೇ ಮನೆ ಮನೆ ಸರ್ವೇ ಮಾಡುವ ಕಾರ್ಯವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ. ಜೀರೋ ಕೋವಿಡ್ ಕ್ಷೇತ್ರ ಮಾಡಬೇಕೆಂದರೆ ನಿಮ್ಮಂಥವರ ಕಾರ್ಯ ನಿಜಕ್ಕೂ ಮುಖ್ಯ. ಕಳೆದ ಬಾರಿ ನೀವುಗಳು ಹಲವಾರು ಬೇಡಿಕೆಯನ್ನು ಇಟ್ಟಿದ್ದೀರಿ ಅದರಲ್ಲಿ ಹಲವಾರು ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ. ನಿಮ್ಮ ಜೀವವನ್ನೂ ಲೆಕ್ಕಿಸದೆ ನಿರಂತರ ಕೆಲಸವನ್ನು ಮಾಡುತ್ತಿರುವ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆಗೆ ನಾವು ಏನು ಕೊಟ್ಟರೂ ಕಡಿಮೆಯೇ. ನಿಮ್ಮ ಜೊತೆಯಲ್ಲಿ ನಾವು ಎಂದೂ ಕೂಡ ಇರುತ್ತೇವೆ ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಬಿ.ವಿ ಮಂಜುನಾಥ್ , ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು,
ಬಿಜೆಪಿ ಕೆ.ಆರ್ ಕ್ಷೇತ್ರದ ಉಪಾಧ್ಯಕ್ಷರಾದ ಸಂತೋಷ್ ಶಂಭು,ಆಶ್ರಯ ಸಮಿತಿಯ ಸದಸ್ಯರಾದ ಹೇಮಂತ್ ಕುಮಾರ್, ಬಿಜೆಪಿ ಕೆ.ಆರ್ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ(ಅಪ್ಪಿ), ಬಿಜೆಪಿ ಪ್ರಮುಖರಾದ ನೂರ್ ಫಾತಿಮಾ, ರವಿ, ಮುರುಳೀಧರ್, ರಾಜು, ಪುನೀತ್, ತಾಲೂಕು ವೈದ್ಯಾಧಿಕಾರಿಗಳಾದ ಮಹಾದೇವಪ್ರಸಾದ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು ,ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಜರಿದ್ದರು.