ಆಶಾಪೂರು ರಸ್ತೆ ಕಳಪೆ ಅಪೂರ್ಣ : ಆಪ್ ಪಕ್ಷ ಆಕ್ರೋಶ

ರಾಯಚೂರು.ನ.೨೨- ಆಶಾಪೂರು ರಸ್ತೆ ನಿರ್ಮಾಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಮತ್ತು ಅರ್ಧಕ್ಕೆ ನಿಂತಿದ್ದರೂ, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇಲ್ಲದಿರುವುದನ್ನು ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಡಿ.ವೀರೇಶ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೪೨ ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ ಬಿಲ್ ಎತ್ತುವಳಿ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸದೆ, ಅರ್ಧಕ್ಕೆ ಬಿಡಲಾಗಿದೆ. ಕೈಗೊಂಡ ಕಾಮಗಾರಿಯೂ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ೨೦೦೧ ರಲ್ಲಿ ಕೆಆರ್‌ಐಡಿಎಲ್‌ನಿಂದ ಟೆಂಡರ್ ಕರೆಯಲಾಗಿತ್ತು. ಎಫ್‌ಸಿಐ ಎದುರುಗಡೆಯಿಂದ ರಾಜಮಾತ ದೇವಸ್ಥಾನ ಹತ್ತಿರದಿಂದ ಹಿಂದುಳಿದ ವರ್ಗಗಳ ಹಾಸ್ಟೆಲ್ ವರೆಗೂ ಕಾಮಗಾರಿ ನಡೆಯುತ್ತಿದ್ದು, ಮೂರು ತಿಂಗಳ ಹಿಂದೆ ಸಿಸಿ ರಸ್ತೆ ಒಂದು ಬದಿಯಲ್ಲಿ ಮಾತ್ರ ಹಾಕಲಾಗಿದೆ.
ಉಳಿದಂತೆ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳದಿರುವುದರಿಂದ ಈ ಭಾಗದ ನಿವಾಸಿಗಳು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಗುಂಡಿ ಮತ್ತು ಧೂಳಿನಿಂದ ಜನ ಅಸ್ವಸ್ಥರಾಗುವಂತಹ ಪರಿಸ್ಥಿತಿ ನಿರ್ಮಿಸಿದೆ. ರಸ್ತೆ ನಿರ್ಮಿಸಿದ ಮೂರು ತಿಂಗಳಲ್ಲಿ ಪ್ಯಾಚ್ ವರ್ಕ್ ಸಹ ಮಾಡಲಾಗಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸಿ, ಗುಣಮಟ್ಟದಿಂದ ನಿರ್ಮಿಸದಿದ್ದರೇ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಸೈಯದ್ ನುಶ್ರತ್ ಅಲಿ, ತಿರುಮಲ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.