ಹುಬ್ಬಳ್ಳಿ,ಜೂ.29: ಸಮಾಜ ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡು ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಅಲ್ಲದೇ ಸದ್ದಿಲ್ಲದ ಸಾಧಕರನ್ನು ಗುರುತಿಸುವ ಉದ್ದೇಶದೊಂದಿಗೆ ನೂತನ ಸೇವಾ ಸಂಸ್ಥೆ ಆಶಾಕಿರಣ ಫೌಂಡೇಶನ್ ಮಂಗಳವಾರ ದಿ.27ರಂದು ಕೃಷ್ಣ ಕಲ್ಯಾಣಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡಿತು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮೂರುಸಾವಿರಮಠದ ಜಗದ್ಗುರುಗಳಾದ ಡಾ.ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ ಉದಾತ್ತ ಧ್ಯೇಯ, ಒಳಿತಿನ ಚಿಂತನೆಯೊಂದಿಗೆ ಆಶಾಕಿರಣ ಸಂಸ್ಥೆ ಅಸ್ಥಿತ್ವಕ್ಕೆ ಬಂದಿದ್ದು ರಚನಾತ್ಮಕವಾಗಿ ಕಾರ್ಯ ಮಾಡಿ ನಾಡಿನುದ್ದಗಲಕ್ಕೂ ಹೆಸರುವಾಸಿಯಾಗಲಿ ಎಂದರು.
ಚಿತ್ರದುರ್ಗದ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಮಾತನಾಡಿ ಸಂಸ್ಥೆ ಅಂಬೇಡ್ಕರ ಅವರ ಸಂವಿಧಾನದ ಆಶಯವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲಿ ಅಲ್ಲದೇ ನೊಂದವರಿಗೆ ಆಸರೆಯಾಗಲಿ ಎಂದು ಹಾರೈಸಿದರು.
ಪತ್ರಕರ್ತ ಗಣಪತಿ ಗಂಗೊಳ್ಳಿ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ರೂವಾರಿ ಅಜೇಯ ಜೋಶಿ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಇದನ್ನು ವಿಸ್ತರಿಸುವ ಉದ್ದೇಶದೊಂದಿಗೆ ಪ್ರತಿಷ್ಠಾನ ಸ್ಥಾಪಿಸಿರುವುದಾಗಿ ಹೇಳಿದರು. ಡಾ.ಜಗದೀಶ ಹಂದಿಗನೂರ, ಡಾ.ವಿನಯಕೃಷ್ಣ ಎಲ್ ಎನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರಲ್ಲದೇ ವಿಶೇಷ ಅತಿಥಿಗಳಾಗಿ ಕನ್ನಡ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಸುನೀಲ ಪುರಾಣಿಕ , ವಿಶೇಷ ಆಹ್ವಾನಿತರಾಗಿ ಸಮಾಜ ಸೇವಕ ಗೋಪಾಲ ಜೋಶಿ, ಸುಧಾ ಗೋಪಾಲ ಜೋಶಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಐ ಪ್ಯಾರಾ ಶೂಟಿಂಗ್ ವಿಜೇತೆ ಜ್ಯೋತಿ ಸಣ್ಣಕ್ಕಿ, ಸಮಾಜ ಸೇವಕ ಯೋಗೇಂದ್ರ ಶಿಂಧೆ, ಮಾಜಿ ಸೈನಿಕ ವೀರೇಶ ಹಟ್ಟಿಹಳ್ಳಿ, ಅಂತಾರಾಷ್ಟ್ರೀಯ ಟೆಕ್ವೆಂಡೋ ವಿಜೇತೆ ನಿಧಿ ಸುಲಾಖೆ, ಡಾ.ಮಂಜುನಾಥ ಶಿವಕ್ಕನವರ, ಕಲಾವಿದ ವಿಠ್ಠಲ ದೊಡ್ಡಮನಿ,;ರಕ್ತದಾನಿ ಕಿರಣ ಗಡದ,ಅಮೃತಾ ನಾಯಕ, ವಿಜಯಲಕ್ಷ್ಮಿ ದಂಡಿನ, ಸಿದ್ಧಾರೂಡ ತಡಕೋಡ, ಯೋಗಪ್ಪ ಮೊರಬ, ತಬಲಾ ಪಟು ನಾಗಲಿಂಗ ಮುರಗಿ, ಗಾಂವಕರ, ಎಸ್ ಎಸ್ ಎಲ್ ಸಿಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಬಾಲಾಜಿ ಕೆ.ನಾಯ್ಡು, ಸಂಜನಾ ಅಂಗಡಿ ಇವರನ್ನು ಗೌರವಿಸಲಾಯಿತು. ಅಕ್ಷತಾ ಜೋಶಿ ಪ್ರಾರ್ಥಿಸಿದರು, ಸಂಪತ್‍ಕುಮಾರ ಸ್ವಾಗತಿಸಿ ಪರಿಚಯಿಸಿದರು.ಶಾಹೀನ್ ನಿರೂಪಿಸಿದರು.