ಆಶಾಕಿರಣ: ನೇತ್ರ ತಪಾಸಣೆ, ಸರ್ಜರಿಗೆ ಕ್ರಮ: ಸಚಿವ ದಿನೇಶ ಗುಂಡೂರಾವ್

ಕಲಬುರಗಿ,ಮಾ.7: ಕಲಬುರಗಿ ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮದಡಿ ಒಟ್ಟು 1.12 ಕೋಟಿ ಜನರ ಕಣ್ಣು ಪರೀಕ್ಷೆ ಮಾಡುವ ಗುರಿಹೊಂದಿ ಹಾಗೇ ಪರೀಕ್ಷೆ ಮಾಡಿದವರಿಗೆ ಈಗಾಗಲೇ 3.32 ಲಕ್ಷ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಪ್ರೇರಣಾ ಹಾಗೂ ಆಶಾಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯೊಂದರಲ್ಲೇ ಈಗಾಗಲೇ 21 ಲಕ್ಷ ಜನರಿಗೆ ಸ್ಕ್ರೀನಿಂಗ್ ಕೈಗೊಂಡು ಈ ಪೈಕಿ 75,200 ಜನರಿಗೆ ಸರ್ಜರಿ ಮಾಡಲಾಗಿದೆ. ಇದಕ್ಕಾಗಿ ರೂ 61 ಕೋಟಿ ವ್ಯಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮುಟ್ಟು ಆಗುವ ಸ್ತ್ರೀಯರಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ವಿತರಣೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದಿಸುವುದಾಗಿ ಹೇಳಿದ ಸಚಿವ ದಿನೇಶ್ ಗುಂಡೂರಾವ್, ಮುಟ್ಟಿನ ವಿಚಾರದಲ್ಲಿ ಮಡಿವಂತಿಕೆ ಇದೆ. ಆ ಮನಸ್ಥಿತಿ ಈಗ ಬದಲಾಗಬೇಕಿದೆ. ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರಕೃತಿ ನೀಡಿದ ಸಹಜ ಪ್ರಕ್ರಿಯೆಯಾಗಿದೆ. ಈ ವಿಚಾರದಲ್ಲಿ ಮುಚ್ಚಮರೆ ಮಾಡದೆ ಮಹಿಳೆಯರು ಮುಟ್ಟಿನ ಕಪ್ ಬಳಕೆ ಮಾಡಬೇಕು. ಶುಚಿ ಕಾರ್ಯಕ್ರಮದಡಿ ಮಂಗಳೂರಿನಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಅಪಘಾತ ಸಂಭವಿಸುವ ಹಾಟ್ ಸ್ಪಾಟ್ ಗಳನ್ನು ಗುರಿತಿಸಲಾಗಿದ್ದು. ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ರವಾನಿಸಲು 65 ಅಂಬುಲೆನ್ಸ್ ಬಳಕೆ ಮಾಡಲಾಗುತ್ತಿದೆ. ಅಗತ್ಯ ಹಾಗೂ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ತರಬೇತಿ ನೀಡಲು ಹಾಗೂ ಅಗತ್ಯ ವೈದ್ಯಕೀಯ ವೆಚ್ಚಕ್ಕಾಗಿ ರೂ 65 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಮುಟ್ಟಿನ ವಿಚಾರದಲ್ಲಿ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟು ಪ್ರೇರಣಾ ಕಾರ್ಯಕ್ರಮದಡಿ ನೈರ್ಮಲ್ಯ ತಡೆಗಟ್ಟಿ ಸುಸ್ಥಿರ ಕ್ರಮ ಕೈಗೊಳ್ಳಲು ಮುಟ್ಟಿನ ಕಪ್ ವಿತರಣೆಗೆ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಬಳಸಿಕೊಳ್ಳಲಾಗುತ್ತಿದೆ. ಮುಟ್ಟಿನ ಘನತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ ತೆಗೆದುಕೊಳ್ಳಲು ಈ ಕಾರ್ಯಕ್ರಮದ ಅಡಿ ಕ್ರಮ ವಹಿಸಲಾಗುತ್ತಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ ರೂ 1.57 ಕೋಟಿ ಹಾಗೂ ಕೆಕೆಆರ್ ಡಿಬಿ ವತಿಯಿಂದ ರೂ 2.01 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 1.03 ಲಕ್ಷ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ವೇದಿಕೆಯ ಮೇಲೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಇಲಾಖೆ ಕಮಿಷನರ್ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಕಮೀಷನರ್ ಭುವನೇಶ್ ಪಾಟೀಲ್, ಜಿಪಂ ಸಿಇಒ ಭವರ್ ಸಿಂಗ್ ಮೀನಾ ಸೇರಿದಂತೆ ಹಲವರಿದ್ದರು.