ಆವೇಶ್ ಖಾನ್ ಮಾರಕ ಬೌಲಿಂಗ್ ಹರಿಣಗಳ ವಿರುದ್ಧ ಭಾರತಕ್ಕೆ 82 ರನ್ ಭರ್ಜರಿ ಜಯ: ಸರಣಿ ಸಮ

ರಾಜ್ ಕೋಟ್ ಜೂ.17- ಆವೇಶ್ ಖಾನ್ ಮಾರಕ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 82 ರನ್ ಭರ್ಜರಿ ಗೆಲುವು ಸಾಧಿಸಿತು.
ಈ ಜಯದೊಂದಿಗೆ ಉಭಯ ತಂಡಗಳು ಸರಣಿ ಸಮಬಲ ಸಾಧಿಸಿವೆ. ಹೀಗಾಗಿ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ‌ ಪಂದ್ಯ ಅಪಾರ ಕುತೂಹಲ ಕೆರಳಿಸಿದೆ.
170 ರನ್ ಗಳ ಗುರಿಯನ್ನು ಬೆನ್ನಹತ್ತಿದ ದಕ್ಷಿಣ ಆಫ್ರಿಕಾ 16.5 ಓವರ್ ಗಳಲ್ಲಿ 87 ರನ್ ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.
ಹರಿಣಗಳ ಪರ ವಾನ್ ಡರ್ ಡುಸೇನ್ 20, ಕ್ಲಿಂಟನ್ ಡಿ ಕಾಕ್ 14, ಮಾರ್ಕೊ ಜಾನ್ಸೆನ್ 12 ರನ್ ಗಳಿಸಿದ್ದನ್ನು ಬಿಟ್ಟರೆ, ನಾಯಕ ಬೆವೂಮಾ ಸೇರಿದಂತೆ ಇತರ ಆಟಗಾರರು ಎರಡಂಕಿ ತಲುಪಲು ವಿಫಲರಾಗಿ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ಭಾರತದ ಪರ ಆವೇಶ್ ಖಾನ್ ನಾಲ್ಕು ವಿಕೆಟ್ ಕಬಳಿಸಿದರು. ಯಜುವೇಂದ್ರ ಚಹಲ್ 2, ಅಕ್ಷರ್ ಪಟೇಲ್ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಗಳಿಸಿದರು.
ಪ್ರವಾಸಿ ತಂಡ ಮೊದಲ ಎರಡು ಪಂದ್ಯಗಳನ್ನು ಗೆದ್ದು ಬೀಗಿತ್ತು. ಭಾರತ ಎರಡು ಪಂದ್ಯಗಳನ್ನು ಗೆದ್ದು ಹರಿಣಗಳಿಗೆ‌ ತಿರುಗೇಟು ನೀಡಿದೆ. ಸರಣಿ ನಿರ್ಣಾಯಕ ಬೆಂಗಳೂರು ಪಂದ್ಯದಲ್ಲಿ ಗೆಲುವಿಗಾಗಿ ಸೆಣಸಾಟ ನಡೆಯವುದು ನಿಶ್ವಿತ.
ಇದಕ್ಕೂ ಮುನ್ನ ಭಾರತ ಮೊದಲು ಬ್ಯಾಟ್ ಮಾಡಿತು. ದಿನೇಶ್ ಕಾರ್ತಿಕ್ ಅರ್ಧಶತಕ ಹಾಗೂ ಆಲ್ ರೌಂಡರ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಭಾರತ 40 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಖೆದುಕೊಂಡಿತು. ಋತುರಾಜ್ ಗಾಯಕ್ವಾಡ್ 5, ಶ್ರೇಯಸ್ ಅಯ್ಯರ್ 4 ಹಾಗೂ ಇಶಾನ್ ಕಿಶನ್ 27 ರನ್ ಗಳಿಸಿ ನಿರ್ಗಮಿಸಿದರು.
ನಾಯಕ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 81 ರನ್ ಗಳವರೆಗೆ ಕೊಂಡೊಯ್ದರು. ಪಂತ್ 17 ರನ್ ಗಳಿಸಿ ನಿರಾಸೆ ಮೂಡಿಸಿದರು.
ನಂತರ ಆಡಲು ಬಂದ ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಹರಿಣಗಳ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು. ತಂಡದ ಮೊತ್ತವನ್ನು 148 ರನ್ ಗಳವರೆಗೆ ಕೊಂಡೊಯ್ದರು.


ಬಿರುಸಿನ ಆಟವಾಡುತ್ತಿದ್ದ ಪಾಂಡ್ಯ ಔಟಾದರು. ಪಾಂಡ್ಯ 31 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿ 46 ರನ್ ಸಿಡಿಸಿದರು.
ಇದರ ಬೆನ್ನಲ್ಲೇ ಕಾರ್ತಿಕ್ ಕೂಡ ಔಟಾದರು. 27 ಎಸೆತಗಳಲ್ಲಿ 9 ಬೌಂಡರಿ ಹಾಗೂ ಎರಡು ಸಿಕ್ಸರ್ ಬಾರಿಸಿ 55 ರನ್ ತಂಡ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಅಕ್ಷರ್ 8 ರನ್ ಗಳಿಸಿದರು.
ಲುಂಗಿ ನಿಗಿಡಿ 2, ಜಾನ್ಸೆನ್ , ಪ್ರೆಟೋರಿಯಸ್, ನೋರ್ಟೆ ಹಾಗೂ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.