
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.13: ಈ ಬಾರಿಯೂ ನನಗೆ ಬಿಜೆಪಿ ಟಿಕೆಟ್ ತಪ್ಪಿರುವುದರಿಂದ ಈ ಬಗ್ಗೆ ವರಿಷ್ಠರ ಬಳಿ ಕಾರಣ ತಿಳಿದುಕೊಳ್ಳುವೆ. ಆವೇಶದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಓದೋ ಗಂಗಪ್ಪ ಹೇಳಿದರು.
ಪಟ್ಟಣದಲ್ಲಿ ನಿನ್ನೆ ಬೆಂಬಲಿಗರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ನಾನು ಊರು, ಕುಟುಂಬ ತೊರೆದು ಪಕ್ಷಕ್ಕಾಗಿ ಶ್ರಮಿಸಿರುವೆ. ಕಳೆದ ಚುನಾವಣೆಯಲ್ಲಿ 45 ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲುವಿನ ಹತ್ತಿರಕ್ಕೆ ಬಂದಿದ್ದೆ. ಆದಾಗ್ಯೂ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿದೆ ಎಂಬುದನ್ನು ವರಿಷ್ಠರೇ ತಿಳಿಸಬೇಕು ಎಂದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ನೀಡಿರುವ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದೇನೆ. ಟಿಕೆಟ್ ನನಗೆದೊರೆಯುವ ವಿಶ್ವಾಸವಿತ್ತು. ಆದರೆ, ಪಕ್ಷವು ಕೃಷ್ಣನಾಯ್ಕ ಅವರಿಗೆ ಟಿಕೆಟ್ ನೀಡಿದೆ. ಈ ಬಗ್ಗೆ ಪಕ್ಷದ ಹೈ ಕಮಾಂಡ್‍ನೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರ್ಯಕರ್ತರು, ಅಭಿಮಾನಿಗಳು ಬೇಸರದಲ್ಲಿದ್ದರು. ಅವರನ್ನು ಸಂತೈಸಲು ಬೆಂಗಳೂರಿನಿಂದ ನೇರವಾಗಿ ಇಲ್ಲಿಗೆ ಬಂದಿರುವೆ. ಕ್ಷೇತ್ರದ ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಿಲ್ಲ. ನನ್ನನ್ನು ನಂಬಿದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸದಾ ಇರುತ್ತೇನೆ ಎಂದು ಹೇಳಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ. ಆದರೆ, ಯಾವ ಕಾರಣಕ್ಕೆ ನನ್ನನ್ನು ಪರಿಗಣಿಸಲಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿದೆ. ಆವೇಶದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸುವೆ. ಅವರು ಏನು ಹೇಳುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದರು.
ನಾನು ಈಗಲೂ ಬಿಜೆಪಿಯಲ್ಲಿದ್ದೇನೆ. ಅಭ್ಯರ್ಥಿ ಪರ ಕೆಲಸ ಮಾಡುವಂತೆ ವರಿಷ್ಠರು ಸೂಚಿಸಿದರೆ, ನನ್ನ ಬೆಂಬಲಿಗರ ಜತೆ ಚರ್ಚಿಸಿ ತೀರ್ಮಾನಿಸುವೆ. ಟಿಕೆಟ್ ಕೈ ತಪ್ಪಿದ್ದಕ್ಕಾಗಿ ಪಕ್ಷದ ನಾಯಕರಿಗೆ ಚ್ಯುತಿ ಬಾರದಂತೆ ಯಾರೂ ನಡೆದುಕೊಳ್ಳಬಾರದು ಎಂದು ಬೆಂಬಲಿಗರಿಗೆ ತಿಳಿಸಿದ್ದೇನೆ ಎಂದು ಹೇಳಿದರು.