ಆವಸರದಲ್ಲಿ ಹೋರಾಟ ಪ್ರಾರಂಭಿಸಬೇಡಿಮಹಾ ಸಂಗ್ರಾಮಿ ಕೃತಿ ಕುರಿತ ಸಂವಾದದಲ್ಲಿ ಎಸ್.ಆರ್.ಹಿರೇಮಠ ಸಲಹೆ

ಸಂಜೆವಾಣಿ ನ್ಯೂಸ್
ಮೈಸೂರು ಡಿ. 24: ಹೋರಾಟದಲ್ಲಿ ಸಮಸ್ಯೆ, ಸವಾಲುಗಳು ಎದುರಾಗುವುದು ಸಹಜ. ಹೋರಾಟದಲ್ಲಿ ಯಶಸ್ಸು ಕಾಣಬೇಕಾದರೆ ಯಾವುದೇ ಕಾರಣಕ್ಕೂ ಹೋರಾಟವನ್ನು ಅವಸರದಲ್ಲಿ ಪ್ರಾರಂಭಿಸಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು.
ನಗರದ ಮಾನಸ ಗಂಗೋತ್ರಿಯ ಇಎಂಎಂಆರ್‍ಸಿ ಸಭಾಂಗಣದಲ್ಲಿ ಅಭಿರುಚಿ ಪ್ರಕಾಶನ, ಅಂಗಳ ಸಾಹಿತ್ಯ ಬಳಗ ಸಹಯೋಗದಲ್ಲಿ ನಡೆದ ರೂಪಾ ಹಾಸನ ರಚನೆಯ ‘ಮಹಾಸಂಗ್ರಾಮಿ’ ಕೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟದ ವಿಚಾರವನ್ನು ಅರಿತು ಹೋರಾಟ ಮಾಡಬೇಕು. ಹಾಗಂತ ಪಿಎಚ್.ಡಿ ರೀತಿಯಲ್ಲಿ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ. ಆದರೆ, ಹೋರಾಟದ ವಿಷಯದ ಕುರಿತು ಮಾಹಿತಿ ಸಂಗ್ರಹಿಸಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಒಂಟಿಯಾಗಿ ಹೋರಾಟ ಮಾಡಬಾರದು. ಒಂಟಿಯಾಗಿ ಹೋರಾಟ ನಡೆಸುವ ಅವಶ್ಯಕತೆ ಏನಿದೆ? ಒಂಟಿಯಾಗಿ ಹೋರಾಟ ನಡೆಸಿ ಪಡೆಯುವಂತಹದ್ದು ಏನಿಲ್ಲ. ಹಾಗಾಗಿ ಸಮಾಜ ಪರಿವರ್ತನೆ ವಿಚಾರದಲ್ಲಿ ಸಾಮೂಹಿಕ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಆರ್‍ಟಿಐ ಮಾಹಿತಿಯಿಂದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಹೋರಾಟದಲ್ಲಿ ಯಾರೊಂದಿಗೂ ರಾಜಿಯಾಗದೆ ಹೋರಾಟ ನಡೆಸಬೇಕು. ಸದುದ್ದೇಶದಿಂದ ನಡೆಸುವ ಹೋರಾಟದಲ್ಲಿ ಎಡರು ತೊಡರು ಎದುರಾಗುವುದು ಸಹಜ. ಅದನ್ನು ಎದುರಿಸಲು ಒಂದು ತಂಡದ ಅವಶ್ಯಕತೆ ಇದೆ ಎಂದರು.
ಭೂಗಳ್ಳರು ವಿಧಾನಸಭೆ ಒಳಗೂ ಹೊರಗೂ ಇದ್ದಾರೆ. ಎಲ್ಲ ಪಕ್ಷಗಳಲ್ಲೂ ಭೂಗಳ್ಳರು ಇದ್ದಾರೆ. ಹಾಗಾಗಿ ದೇಶದ ಆಡಳಿತವನ್ನು ಉತ್ತಮ ಜನರಿಗೆ ನೀಡಿದರೆ ಭೂಗಳ್ಳತನಕ್ಕೆ ಕಡಿವಾಣ ಹಾಕಬಹುದು. ಬಳ್ಳಾರಿ ಗಣಿಗಾರಿಕೆಯಲ್ಲಿ ಹಲವರು ಜೈಲು ಸೇರಲು ಸಂವಿಧಾನ ಹಾಗೂ ಕಾನೂನು ಸಹಕಾರಿಯಾಯಿತು. ಹಾಗಾಗಿ ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಸರಿಯಾಗಿ ಚಲಾಯಿಸಬೇಕು ಎಂದರು.
ಹಣ, ಹೆಂಡಕ್ಕೆ ಮತಗಳನ್ನು ಮಾರಿಕೊಳ್ಳಬಾರದು. ನಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಇರಬೇಕಾದವರು ನಾಗರಿಕ ಸಮಾಜದಲ್ಲಿ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿ ರೂಪಾ ಹಾಸನ್ ಮಾತನಾಡಿದರು. ಅಭಿರುಚಿ ಗಣೇಶ, ಅಂಗಳ ಸಾಹಿತ್ಯ ಬಳಗದ ಕಲ್ಲಕಳ್ಳಿ ಕುಮಾರ್, ವರಹಳ್ಳಿ ಆನಂದ, ಪ್ರದೀಪ್ ಮುಮ್ಮಡಿ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.