ಆಳ್ವಾಸ್‌ನಲ್ಲಿ ವಿಶ್ವ ರಂಗಭೂಮಿ ದಿನದ ಆಚರಣೆ

ಮೂಡುಬಿದಿರೆ, ಮಾ.೨೮- ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವತಿಯಿಂದ ವಿಶ್ವ ರಂಗಭೂಮಿ ದಿನದ ಅಂಗವಾಗಿ “ಉಪನ್ಯಾಸ – ರಂಗ ಗೀತೆ ಗಾಯನ” ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಹಿರಿಯ ಪತ್ರಕರ್ತರು ಹಾಗೂ ಆಳ್ವಾಸ್ ನ್ಯೂಸಿಯಂನ ಸಂಯೋಜಕರಾದ ಶ್ರೀಕರ ಎಲ್ ಭಂಡಾರ್‌ಕರ್ ವರು ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ, ಪ್ರತಿಯೊಬ್ಬರೂ ನಾಟಕದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾಟಕದ ಮಹಿಮೆಯನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯೋಜಕ ಜೀವನ್ ರಾಮ್ ಸುಳ್ಯ ಮಾತನಾಡಿ ಆಧುನಿಕ ಪ್ರಪಂಚದಲ್ಲಿ ನಾಟಕ ಎನ್ನುವುದು ಭರಾಟೆಯಾಗಿಬಿಟ್ಟಿದೆ. ಆದರೆ, ರಂಗಭೂಮಿಯಿಲ್ಲದೆ ಯಾರೂ ಬದುಕಲು ಸಾದ್ಯವಿಲ್ಲ. ಸಣ್ಣ ಮಗುವಿನಿಂದ ಹಿಡಿದು, ಪ್ರತಿಯೊಬ್ಬರೂ ಪ್ರತೀ ಸಂದರ್ಭದಲ್ಲೂ ನಟನೆ ಮಾಡುತ್ತಾರೆ. ಅದರಲ್ಲಿ ಕೆಲವರು ರಂಗಕ್ಷೇತ್ರದಲ್ಲಿ ಜೀವನವನ್ನು ಕಂಡುಕೊಳ್ಳುತ್ತಾರೆ. ಆದರೆ, ಯಾರೂ ಕೂಡ ತಾವು ನಡೆದುಕೊಂಡು ಬಂದ ದಾರಿಯನ್ನು ಮರೆಯಬಾರದು” ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್  ಅಧ್ಯಕ್ಷತೆಯನ್ನು ವಹಿಸಿದ್ದರು.

ರಂಗಭೂಮಿ ದಿನಾಚರಣೆಯ ಪ್ರಯುಕ್ತ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆ ಹಾಗೂ ಧಾಂ ಧೂಂ ಸುಂಟರಗಾಳಿ ನಾಟಕದ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

 ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ವಾಸುದೇವ್, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎನ್.ಖಂಡಿಗೆ, ಹಿಂದಿ ವಿಭಾಗದ ಮುಖ್ಯಸ್ಥ ಡಾ.ರಾಜೀವ್ ಹಾಗೂ ಕನ್ನಡ ವಿಭಾಗದ ಉಪನ್ಯಾಸಕ ರಾಮ್‌ಪ್ರಸಾದ್ ಉಪಸ್ಥಿತರಿದ್ದರು.

 ವಿದ್ಯಾರ್ಥಿ ಮನುಜ ನೇಹಿಗ ಉದ್ಘಾಟನಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ನಾಗಶ್ರೀ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.