ಆಳವಾದ ಪರಿಶುದ್ಧ ಭಕ್ತಿಗೆ ಶಿವ ಮೆಚ್ಚುವನು: ಹಾರಕೂಡ ಶ್ರೀ

Oplus_131072

ಬೀದರ್:ಏ.20: ಹರಿನಾಮ ಸಂಕೀರ್ತನೆಗೆ ಭಕ್ತಿ ಪ್ರಧಾನವೆ ಹೊರೆತು ಭಾಷೆ ಅಲ್ಲ. ಆಳವಾದ ಪರಿಶುದ್ಧ ಭಕ್ತಿಯಿರದ ಯಾವ ಭಜನೆಯು ಶಿವ ಮೆಚ್ಚಲಾರ ಎಂದು ಹಾರಕೂಡ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸರಜವಳಗಾ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಹ ಕಾರ್ಯಕ್ರಮ ನಿಮಿತ್ಯ ಆಯೋಜಿಸಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಉದಾರ ಚರಿತರು ಎಲ್ಲರನ್ನೂ ಅಪ್ಪಿಕೊಳ್ಳುವ ಔದಾರ್ಯತೆಯನ್ನು ಹೊಂದಿರುತ್ತಾರೆ.
ಶ್ರೀಹರಿಯ ನಾಮ ಸ್ಮರಣೆಯಿಂದ ಮನಸ್ಸಿನ ವೈಶಾಲ್ಯತೆ ವೃದ್ಧಿಸಿ, ಸಚ್ಚಿದಾನಂದ ಮೆಚ್ಚುವಂತಹ ಸದ್ಗುಣಗಳು ಪ್ರಾಪ್ತವಾಗಿ, ಸಹಬಾಳ್ವೆ, ಸಮಭಾವ ನೆಲೆಗೊಳ್ಳುತ್ತದೆ.
ಭಕ್ತಿ ಶ್ರದ್ಧೆಯ ಭಜನೆಯಿಂದ ಮನೋಮಯ ಕೋಶದ ವೃದ್ಧಿಯಾಗಿ, ಸಂಸಾರಿಕ ಭಾರ ಇಳಿದು, ನೆಮ್ಮದಿ ಬದುಕು ರೂಪುಗೊಳ್ಳುತ್ತದೆ.
ಕೋಟಿ ವರ್ಷಗಳ ಜಪತಪಗಳಿಗಿಂತಲೂ ಒಂದು ದಿನದ ಮಹಾತ್ಮರ ಸಾನಿಧ್ಯದ ಸತ್ಸಂಗದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವುದು ಮಿಗಿಲಾಗಿರುತ್ತದೆ.
ಸರಜವಳಗಾ ಭೌತಿಕವಾಗಿ ಪುಟ್ಟ ಗ್ರಾಮ ವಾಗಿದ್ದರೂ ಇಲ್ಲಿಯ ಎಲ್ಲಾ ಜನತೆ ಸಾತ್ವಿಕರಾಗಿದ್ದು, ಧರ್ಮ, ಅಧ್ಯಾತ್ಮ, ಭಕ್ತಿ ಮಾರ್ಗದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದಕ್ಕೆ ಇವತ್ತಿನ ಸಮಾರಂಭವೇ ಸಾಕ್ಷಿಯಾಗಿದೆ.
ಬರುವ ದಿನಗಳಲ್ಲಿ ಮಳೆ, ಬೆಳೆ ಉತ್ತಮವಾಗಿ, ಸಮೃದ್ಧಿಯ ತೊಟ್ಟಿಲು ತೂಗುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ಜ್ಞಾನೇಶ್ವರ ಬಿರಾದಾರ ಕಾರ್ಯಕ್ರಮವನ್ನು ನಿರೂಪಿಸಿದರು.
ಲಿಂಬಾಜಿ ಬಿರಾದಾರ, ಬಬನ ಮಹಾರಾಜ ಧಾನೂರಿ, ಶ್ರೀರಂಗ ಬಿರಾದಾರ, ಬಲಭೀಮ ಬಿರಾದಾರ, ಬಂಡಯ್ಯ ಮಠಪತಿ, ಹಣವಂತರಾವ ಸೂರ್ಯವಂಶಿ, ಶಿವಾಜಿ ಕುಂಬಾರ, ದುರ್ಯೋಧನ ಬೆಳಂಬೆ, ಬಿಎಸ್. ಮಠಪತಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ : ಗುರುವಾರ ಸಾಯಂಕಾಲ ಸರಜವಳಗಾ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಹ ಕಾರ್ಯಕ್ರಮದ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡದ ಪರಮ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಲಿಂಬಾಜಿ ಬಿರಾದರ, ಬಬನ ಮಹಾರಾಜ ಧಾನೂರಿ, ಅಪ್ಪಣ್ಣ ಜನವಾಡ ಉಪಸ್ಥಿತರಿದ್ದರು.