ಆಳಂದ: ಬರಗಾಲ ಘೋಷಣೆಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಆಗ್ರಹ

ಆಳಂದ :ಆ.31:ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು ಆಗಷ್ಟ್ ತಿಂಗಳು ಮುಗಿದರೂ ವಾಡಿಕೆಯ ಮಳೆ ಬಿದ್ದಿಲ್ಲ ಆದ್ದರಿಂದ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರ ಕೂಡಲೇ ಬರಗಾಲ ಪೀಡಿತ ತಾಲೂಕು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ಕೆಲವು ಭಾಗಗಳಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದೆ. ಈಗ ಮಳೆಯೂ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುತ್ತಿವೆ ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದೆ. ಮಳೆ ಮಾತ್ರ ಸಮರ್ಪವಾಗಿ ಬರದೇ ಇರುವುದರಿಂದ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಏಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಅಲ್ಲದೇ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆಳಂದ ತಾಲೂಕಿನಲ್ಲಿ ಶೇ. 91 ರಷ್ಟು ಬಿತ್ತನೆಯಾಗಿದೆ. 1.33.890 ಹೇಕ್ಟರ್‍ನಲ್ಲಿ 1.21.595 ಹೇಕ್ಟರ್ ಬಿತ್ತನೆ ಮಾಡಲಾಗಿದೆ. ದ್ವಿದಳ ಧಾನ್ಯಗಳಲ್ಲಿ ಈ ಸಲ ತೊಗರಿ ಹೆಚ್ಚಿಗೆ ಬಿತ್ತನೆಯಾಗಿದೆ. ಎಣ್ಣೆಕಾಳು, ವಾಣಿಜ್ಯ ಬೆಳೆಗಳು ನಿಗದಿತ ಪ್ರಮಾಣದಂತೆ ಬಿತ್ತನೆಯಾಗಿವೆ ಆದರೆ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿವೆ ಎಂದು ಹೇಳಿದ್ದಾರೆ.

ಮಳೆ ಬಾರದೇ ಇರುವುದರಿಂದ ಜನ, ಜಾನವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿವೆ. ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ಮಾಡಬೇಕು ಅಲ್ಲದೇ ಜಾನುವಾರುಗಳಿಗಾಗಿ ಗ್ರಾ.ಪಂ ಮಟ್ಟದಲ್ಲಿ ಮೇವು ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.