ಆಳಂದ ತುರ್ತುವೈದ್ಯಕೀಯ ಸೌಲಭ್ಯಕ್ಕೆ ಶಾಸಕರ ಮನವಿ

ಆಳಂದ:ಎ.21: ತಾಲೂಕಿನಲ್ಲಿ ಕೋರೋನಾ ಪ್ರಕರಣಗಳು ದಿನೇ ದಿನೇ ವ್ಯಾಪಕವಾಗಿ ಪತ್ತೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮಕ್ಕಾಗಿ ಅಗತ್ಯ ತುರ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರಿಗೆ ಪತ್ರ ಬರೆದಿರುವ ಅವರು, ಆಳಂದ ತಾಲೂಕಿನ ಆಳಂಗಾ ಗ್ರಾಮದಲ್ಲಿ ಒಂದೇ ದಿನ 60 ಪ್ರಕರಣಗಳು ಪತ್ತೆಯಾಗಿವೆ ಇದು ಜನರಲ್ಲಿ ಆತಂಕವನ್ನುಂಟು ಮಾಡಿದೆ ಅಲ್ಲದೇ ಆಳಂದ ತಾಲೂಕು ಪ್ರದೇಶವು ನೆರೆಯ ಮಹಾರಾಷ್ಟ್ರದೊಂದಿಗೆ 3 ಸ್ಥಳಗಳಲ್ಲಿ ಗಡಿಯನ್ನು ಹಂಚಿಕೊಳ್ಳುತ್ತದೆ ಇದರಿಂದ ಕ್ಷೇತ್ರದ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಆಳಂದ ತಾಲೂಕಿನಲ್ಲಿ ಕೋವಿಡ್ ರೋಗಿಗಳ ತುರ್ತು ಚಿಕಿತ್ಸೆಗಾಗಿ ವೆಂಟಿಲೆಟರ್, ಆಕ್ಸಿಜನ್ ಒದಗಿಸಿ, ಆಧುನಿಕ ಸೌಲಭ್ಯವುಳ್ಳ ಬೆಡ್‍ಗಳನ್ನು ಹೆಚ್ಚಿಸಿ ಹೆಚ್ಚುವರಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಲೇ ನೇಮಿಸುವಂತೆ ಮನವಿ ಮಾಡಿದ್ದಾರೆ.

ಕೇರ್ ಸೆಂಟರ್ ಆರಂಭ: ಕೋರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಳಂದ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಇಲ್ಲಿ 75 ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ತುರ್ತಾಗಿ ಅಗತ್ಯವಿರುವವರು ಈ ಕೇಂದ್ರದ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.