ಆಳಂದ: ಖಜೂರಿ, ಜೀರೊಳ್ಳಿಯಲ್ಲಿ ಹೆಸರಿಗೆ ಮಾತ್ರ ಚೆಕ್ ಪೋಸ್ಟ್

ಆಳಂದ,ನ.29-ಕೊರೊನಾ ರೂಪಾಂತರಿ “ಓಮಿಕ್ರಾನ್” ಆತಂಕದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಕಲಬುರಿ ಜಿಲ್ಲೆಯ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್ ಪೋಸ್ಟ್ ನಿರ್ಮಾಣ ಮಾಡಿದಂತಾಗಿದೆ.
ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಸಾಕಷ್ಟು ವಾಹನಗಳು ಗಡಿ ಜಿಲ್ಲೆಗಳ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿವೆ, ಆದರೆ ಚೆಕ್ ಪೋಸ್ಟ್ ನಲ್ಲಿ ಮಾತ್ರ ಯಾವುದೇ ರೀತಿಯ ತಪಾಸಣೆ ನಡೆಯುತ್ತಿಲ್ಲ. ಚೆಕ್ ಪೋಸ್ಟ್ ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ಆರೋಗ್ಯ ಸಹಾಯಕರು ಮಾತ್ರ ಇದ್ದು, ಅವರೂ ಸಹ ಯಾವುದೇ ತಪಾಸಣೆ ನಡೆಸದೆ ವಾಹನಗಳನ್ನು ಬಿಡುತ್ತಿದ್ದಾರೆ.
ವ್ಯಾಕ್ಸಿನ್ ರಿಪೋರ್ಟ ಮತ್ತು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಅವರಿಗೆ ಪ್ರವೇಶ ನೀಡಬೇಕು ಆದೆರೆ ಇಲ್ಲಿ ಅದಾಗುತ್ತಿಲ್ಲ. ಇದರಿಂದಾಗಿ ಕೊರೊನಾ ಸೋಂಕು ಹರಡುವ ಆತಂಕ ಮನೆ ಮಾಡಿದೆ.
ಮಹಾರಾಷ್ಟ್ರದ ಗಡಿ ಭಾಗವಾದ ಆಳಂದ ತಾಲ್ಲೂಕಿನ ಹೀರೊಳ್ಳಿ ಮತ್ತು ಖಜೂರಿ ಚೆಕ್ ಪೋಸ್ಟ್ ಗಳು ಇದ್ದೂ ಇಲ್ಲದಂತಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವ ಯಾವುದೇ ವಾಹನಗಳ ತಪಾಸಣೆ ಇಲ್ಲಿ ನಡೆಯುತ್ತಿಲ್ಲ. ಚೆಕ್ ಪೋಸ್ಟ್ ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ಆರೋಗ್ಯ ಸಹಾಯಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವರಿಂದ ಮಹಾರಾಷ್ಟ್ರದಿಂದ ಬರುವ ಎಲ್ಲ ವಾಗನಗಳ ತಪಾಸಣೆ ಕಷ್ಟಸಾಧ್ಯವಾಗಿದೆ.
ಈ ಸಂಬಂಧ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರೆ ಅವರು, ಸರ್ಕಾರದಿಂದ ನಮಗಿನ್ನೂ ಮಾರ್ಗಸೂಚಿ ಬಂದಿಲ್ಲ, ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಮಾದನಹಿಪ್ಪರಗಾ ಪೊಲೀಸ್ ಠಾಣೆಯ ಪಿ.ಎಸ್.ಐ ಅವರನ್ನು ಸಂಪರ್ಕಿಸಿದರೆ ಅವರು, ಸಿಬ್ಬಂದಿ ಕೊರತೆ ಇದೆ, ಬೇರೆ ಕಡೆ ಬಂದೋಬಸ್ತ್ ಗೆ ಹೋಗಿದ್ದಾರೆ. ಮುಂದೆ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎನ್ನುತ್ತಾರೆ. ಒಟ್ಟಾರೆ ಕೊರೊನಾ ಹೊಸ ತಳಿಯ ಆತಂಕ ಎಲ್ಲೆಡೆ ಮನೆ ಮಾಡಿದ್ದರೂ ಜಿಲ್ಲಾಡಳಿತ, ತಾಲ್ಲೂಕ ಆಡಳಿತ ಮತ್ತು ಪೊಲೀಸ್ ಇಲಾಖೆ ಮಾತ್ರ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳದೆ ಕೈಕಟ್ಟಿ ಕುಳಿತಿದೆ.
ಕಳೆದ ಬಾರಿ ಹೀಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮಹಾರಾಷ್ಟ್ರದಿಂದ ಜನ ಅತಿಯಾಗಿ ಆಗಮಿಸಿದ್ದರಿಂದಲೇ ಕೊರೊನಾ ಸೋಂಕು ಹೆಚ್ಚಳವಾಗಿ ಹಲವು ಸಾವು-ನೋವುಗಳು ಸಂಭಿವಿಸಿದ್ದವು. ಈಗಲೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಮುಂದೆ ಸಾಕಷ್ಟು ಸಮಸ್ಯೆ ಎದುರಿಸುವುದು ಖಂಡಿತ.