
ಕಲಬುರಗಿ:ಮಾ.27:ಆಳಂದ ಮತಕ್ಷೇತ್ರದ ಜನತೆಯ ಸಹಕಾರದಿಂದ ಆಳಂದ ಮತಕ್ಷೇತ್ರದ ಸೇವಕನಾಗಿ ಚುನಾಯಿತನಾಗಿ ಐದು ವರ್ಷಗಳು ಕಳೆದಿವೆ ಈ ಐದು ವರ್ಷಗಳಲ್ಲಿ ಒಂದು ದಿನವೂ ವ್ಯರ್ಥವಾಗದಂತೆ ಕಾರ್ಯನಿರ್ವಹಿಸಿದ್ದೇನೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ರವಿವಾರ ಕಲಬುರಗಿಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಕಲಬುರಗಿಯ ಆಳಂದ ನಿವಾಸಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಕೋಟ್ಯಾಂತರ ರೂ. ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದೇವೆ ರಾಜಕೀಯ ವಿರೋಧಿಗಳು ಬಂದರೆ ಅವರಿಗೆ ಆ ಕಾಮಗಾರಿಗಳನ್ನು ತೋರಿಸಲು ಸಿದ್ಧರಿದ್ದೇವೆ ಎಂದು ಬಹಿರಂಗ ಸವಾಲು ಹಾಕಿದರು.
ಆಳಂದ ಮತಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮವನ್ನು ರೂಪಿಸಿಕೊಂಡು ಮುನ್ನಡೆಯುವ ಪ್ರಯತ್ನದಲ್ಲಿ ಮೊದಲ ವರ್ಷ ಎದುರಾದದ್ದು, ಸಮ್ಮಿಶ್ರ ಸರ್ಕಾರವೆಂಬ ಸವಾಲು. ನಂತರದ ದಿನಗಳಲ್ಲಿ ಎರಡು ಬಾರಿ ನೆರೆ ಹಾವಳಿ ಮತ್ತು ಕೋವಿಡ್-19, ಕೋವಿಡ್ 2 ಅಲೆಗೆ ನನ್ನ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬೀಳಬಹುದೆಂದು ಯೋಚಿಸಿದ್ದೆ ಆದರೆ ಸತತ ಪ್ರಯತ್ನದಿಂದ ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಇದರ ಸಂಪೂರ್ಣ ಶ್ರೇಯಸ್ಸು ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ ಎಂದು ನುಡಿದರು.
ನೆರೆ ಹಾವಳಿಯ ಸಂಧರ್ಭದಲ್ಲಿ ನನ್ನ ನಂಬಿದ ಜನತೆಗೆ ಕೈಲಾದ ಸಹಾಯ ಸಹಕಾರವನ್ನು ನೀಡಿ, ಕೋವಿಡ್ ಲಾಕ್ಡೌನ್‍ನಲ್ಲೂ ಸಹಿತ ಹಸಿದವರಿಗೆ, ಅಶಕ್ತರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ, ವೈದ್ಯಕೀಯ ನೆರವು ಬೇಕಾದವರಿಗೆ ಸರ್ಕಾರದ ವತಿಯಿಂದ ಹಾಗೂ ನನ್ನ ಎಸ್‍ಆರ್‍ಜಿ ಫೌಂಡೇಶನ್ ವತಿಯಿಂದ ಔಷಧ ಉಪಚಾರ ಮತ್ತು ಆಹಾರ ಸಾಮಗ್ರಿಗಳನ್ನು ನೀಡಿ ಕಷ್ಟದಲ್ಲಿರುವವರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.
ಇದರ ಹೊರತಾಗಿಯೂ ನನ್ನ ಮತ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಎಲ್ಲಿಯೂ ಎಡೆಮಾಡಿಕೊಡದೆ ಕುಡಿಯುವ ನೀರು, ಕೃಷಿ ಭೂಮಿಗೆ ನೀರಾವರಿ ಯೋಜನೆಗಳು, ರಸ್ತೆ, ಸೇತುವೆಗಳು, ಶಾಲಾ ಕಾಲೇಜು ಕಟ್ಟಡಗಳು ವಸತಿ ನಿಲಯಗಳು, ವಿದ್ಯುತ್ ಸಂಪರ್ಕ ಹೀಗೆ 1768 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
ಕ್ಷೇತ್ರದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಲಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಿಗೆ ರಸ್ತೆ ಮಂಜೂರಿ ಮಾಡಿ ಗ್ರಾಮ ಗ್ರಾಮವೂ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಸುಗಮವಾಗಿ ಸಂಪರ್ಕಿಸುವಂತೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ 180 ಕೋ. ರೂ ಅನುದಾನ ನೀಡಿ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಕ್ರಾಂತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜದ ಆಧಾರ ಸ್ತಂಭವಾದ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಶಾಲೆಯ ಭೌತಿಕ ಪರಿಸರ ಉತ್ತಮವಾಗಿಸಲು ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಶಾಲಾ ಕಾಲೇಜುಗಳ ತರಗತಿ ಕೋಣೆಗಳ ನಿರ್ಮಾಣ, ಹೈಟೆಕ್ ಶೌಚಾಲಯ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ಅಳವಡಿಕೆ, ಬೆಂಚ್, ಡೆಸ್ಕ್ ಪೂರೈಕೆ ಸೇರಿದಂತೆ ಉಪಯುಕ್ತ ಸಂಪನ್ಮೂಲ ಒದಗಿಸುವಲ್ಲಿ ಹಿಂದೆ ಬಿದ್ದಿಲ್ಲ ಇತಿಹಾಸದಲ್ಲಿಯೇ ಹೆಚ್ಚು ಎನ್ನುವಂತೆ 400 ಶಾಲಾ ಕಾಲೇಜುಗಳ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. 105 ಕೋ. ರೂ ಗಳನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಒದಗಿಸಲಾಗಿದೆ. ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಆಳಂದ ಶೈಕ್ಷಣಿಕವಾಗಿ ಮುಂದಿರುವ ತಾಲೂಕು ಎಂಬ ಹೆಗ್ಗಳಿಕೆ ಇತ್ತು ಅದನ್ನು ನಿರಂತರವಾಗಿ ಕಾಪಾಡಿಕೊಂಡು ಬರಲಾಗಿದೆ. ಇದೀಗ ಸತತವಾಗಿ ನಮ್ಮ ತಾಲೂಕು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಸಂತಸ ತಂದಿದೆ. ಮಕ್ಕಳ ಉತ್ತಮ ಅಭ್ಯಾಸಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡಲು ನೂರಾರು ಕೋಟಿ ಅನುದಾನ ನೀಡಲಾಗಿದೆ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ 121 ಕೋಟಿ. ರೂ, ಧಾರ್ಮಿಕ ಕ್ಷೇತ್ರಕ್ಕೆ 30 ಕೋಟಿ ರೂ. ಖರ್ಚು, ನೀರಾವರಿ ಕ್ಷೇತ್ರಕ್ಕೆ 121 ಕೋಟಿ ರೂ. ಅನುದಾನ, ಕೃಷಿ ಕ್ಷೇತ್ರಕ್ಕೆ 210 ಕೋಟಿ ಮೀಸಲು, ಮೂಲಭೂತ ಸೌಕರ್ಯಕ್ಕೆ 110 ಕೋಟಿ ಅನುದಾನ, ಕುಡಿಯುವ ನೀರು ಸೌಲಭ್ಯಕ್ಕೆ ಐತಿಹಾಸಿಕ 57 ಕೋಟಿ ರೂ. ಅನುದಾನ, ತೋಟಗಾರಿಕೆಕ್ಷೇತ್ರಕ್ಕೆ 6. ಕೋಟಿ 80 ಲಕ್ಷ ಮೀಸಲು, ರೇಶ್ಮೆ ಬೆಳೆಗಾರರ ಕಲ್ಯಾಣಕ್ಕೆ 2 ಕೋಟಿ ವ್ಯಯ ಮಾಡಲಾಗಿದೆ ಎಂದು ಹೇಳಿ ವಿವಿಧ ಕ್ಷೇತ್ರಗಳಲ್ಲಿ ತಾವು ಅನುದಾನ ನೀಡಿದ ರೀಪೋರ್ಟ ಕಾರ್ಡ ತಿಳಿಸಿದರು.
ಸಭೆಯಲ್ಲಿ ಅಮರನಾಥ ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಅಂಬಾರಾಯ ಅಷ್ಟಗಿ, ಶಶಿಕಲಾ ಟೆಂಗಳಿ, ಹರ್ಷಾನಂದ ಗುತ್ತೇದಾರ, ಮಲ್ಲಿಕಾರ್ಜುನ ತಡಕಲ, ರಾಮಚಂದ್ರ ಅವರಳ್ಳಿ, ಮಲ್ಲಿಕಾರ್ಜುನ ಕಂದಗೂಳೆ, ಹಣಮಂತರಾವ ಮಾಲಾಜಿ, ಮಲ್ಲಿನಾಥ ಪರೇಣಿ, ಶಿವಪ್ಪ ವಾರಿಕ, ವಿಠ್ಠಲರಾವ ಪಾಟೀಲ, ಸಂತೋಷ ಹಾದಿಮನಿ, ಆನಂದರಾವ ಪಾಟೀಲ, ಗೌರಿ ಚಿಚಕೋಟಿ, ರುದ್ರಯ್ಯ ಹಿರೇಮಠ ಬಸವರಾಜ ಬಿರಾದಾರ, ಕಲ್ಯಾಣಿ ಸಾವಳಗಿ, ಚಂದ್ರಕಾಂತ ಘೋಡಕೆ, ಶರಣಗೌಡ ಪಾಟೀಲ ಸೇರಿದಂತೆ ತಾಲೂಕಿನ ಸಾವಿರಾರು ನಾಗರಿಕರು ಭಾಗವಹಿಸಿದ್ದರು.