ಆಳಂದ ಆಸ್ಪತ್ರೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

ಆಳಂದ :ಮೇ.28: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಲಿಪ ಸಾಸಿ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಕೋವಿಡ್ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯಕೀಯ ಸಿಬ್ಬಂದಿಗಳಿಗೆ ಸೂಚಿಸಿದರು.ಈಗ ನಿಧಾನವಾಗಿ ಸೋಂಕು ಕಡಿಮೆಯಾಗುತ್ತಿದೆ ಹಾಗಂತ ಯಾರೂ ಮೈ ಮರೆಯಬಾರದು ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ವೈರಸ್ ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.ಆಸ್ಪತ್ರೆಯಲ್ಲಿ ಲಭ್ಯವಿರುವ ವ್ಯಾಕ್ಸಿನ್, ಆಕ್ಸಿಜನ್ ಸಿಲಿಂಡರ್, ಮಾತ್ರೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಹಾಜರಾತಿ ಪರೀಕ್ಷಿಸಿದರು. ಕೋವಿಡ್ ಕೇರ್ ಸೆಂಟರನಲ್ಲಿ ನೀಡಲಾಗುತ್ತಿರುವ ವ್ಯವಸ್ಥೆಯನ್ನು ರೋಗಿಗಳ ಹತ್ತಿರ ಹೋಗಿ ವಿಚಾರಿಸಿದರು. ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ,ಆಳಂದ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿಗಳ ಹುದ್ದೆ ಭರ್ತಿಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.