ಆಳಂದ‌ ಮತ್ತು ಚಿಂಚೋಳಿ ಆಸ್ಪತ್ರೆಗೆ ಸಂಸದ‌ ಭಗವಂತ ಖೂಬಾ ಭೇಟಿ

ಕಲಬುರಗಿ.ಏ.27: ಬೀದರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಆಳಂದ ಹಾಗೂ ಚಿಂಚೋಳಿ ತಾಲೂಕು ಆಸ್ಪತ್ರೆಗಳಿಗೆ ಕ್ಷೇತ್ರದ ಸಂಸದ ಭಗವಂತ ಖೂಬಾ ಅವರು ಮಂಗಳವಾರ ಭೇಟಿ ನೀಡಿ, ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು.

ಪಿ.ಪಿ.ಇ ಕಿಟ್ ಧರಿಸಿಕೊಂಡಿದ್ದ ಸಂಸದರು ಕೋವಿಡ್ ಸೋಂಕಿತರನ್ನು ಭೇಟಿಯಾಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ವಿಚಾರಿಸಿದರು. ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಧೈರ್ಯದ ಮಾತು ಹೇಳಿದ‌ ಸಂಸದರು ಯಾವುದೇ ಕಾರಣಕ್ಕೂ ಭಯಕ್ಕೊಳಗಾಗಬೇಡಿ. ನಿಮಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಭಯ‌ ನೀಡಿದರು.

ಅಸ್ಪತ್ರೆಯಲ್ಲಿ ಅಕ್ಸಿಜನ್, ಇಂಜೆಕ್ಷನಗಳು, ಔಷಧಗಳು ಕೊರತೆಯಾಗದಂತೆ ನೋಡಿಕೊಳ್ಳುವಂತೆ ಎರಡು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇನ್ನೂ ಅಸ್ಪತ್ರೆಯಲ್ಲಿ ಕೋವಿಡ್ ಬೆಡ್ ಗಳೆಷ್ಟು, ಆಕ್ಸಿಜೆನ್, ಔಷಧಗಳೆಷ್ಟು ಇತ್ಯಾದಿ ಆಸ್ಪತ್ರೆಯ ಸೇವೆಗಳ ವಿವರಗಳನ್ನು ಆಸ್ಪತ್ರೆಯ ಸೂಚನಾ ಫಲಕದಲ್ಲಿ ಪ್ರತಿದಿನ ಬರೆಯಿರಿ, ಇದರಿಂದ ರೋಗಿಗೆ ಧೈರ್ಯ ಬರುತ್ತೆ ಎಂದು ಸೂಚಿಸಿದರು.

ಸೋಂಕಿತರಿಗೆ ಇಲ್ಲಿಯೆ ಚಿಕಿತ್ಸೆ ನೀಡಿ ಗುಣಪಡಿಸಿ, ವಿನಾಕಾರಣ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಬೇಡಿ. ಆಸ್ಪತ್ರೆಯ ಮೂಲಸೌಕರ್ಯದಲ್ಲಿ ಕೊರತೆ ಏನಾದರು ಇದ್ದಲ್ಲಿ ನನಗೆ ತಿಳಿಸಿದಲ್ಲಿ ಸರಿಪಡಿಸುವೆ ಎಂದು ವೈದ್ಯರಿಗೆ ಸಂಸದ‌ ಭಗವಂತ ಖೂಬಾ ತಿಳಿಸಿದರು.

ಆಳಂದ‌ ಮತ್ತು ಚಿಂಚೋಳಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಜನರಿಗೆ ಕೋವಿಡ್ ಲಸಿಕೆಗಳನ್ನು ಆದ್ಯತೆ ಮೇರೆಗೆ ನೀಡಬೇಕು. ಜೊತೆಗೆ ಲಸಿಕೆ ಹೆಚ್ಚಾಗಿ ಪಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಮಹಾಮಾರಿ ಕೋವಿಡ್ ಸೋಂಕು ಬಂದರೆ ಹೆದರದೇ ಧೈರ್ಯವಾಗಿ ಎದುರಿಸಿ ಸೋಂಕಿನಿಂದ ಗುಣಮುಖರಾಗಬೇಕು. ಮಾಸ್ಕ್, ಸ್ಯಾನಿಟಾಯಿಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಲೆಬೇಕು. ಮನೆಯಲ್ಲಿ ಸಣ್ಣ ಮಕ್ಕಳಿದಲ್ಲಿ ಪಾಲಕರು ವಿಶೇಷ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ ಸೇರಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.