ಆಳಂದ್ ಸಕ್ಕರೆ ಕಾರ್ಖಾನೆ 6 ಕೋಟಿ ರೂ.ಗಳ ಬಾಕಿ ಹಣ ಕೊಡದಿದ್ದರೆ ಹೋರಾಟ: ಬಿ.ಆರ್. ಪಾಟೀಲ್

ಕಲಬುರಗಿ,ನ.12: ಜಿಲ್ಲೆಯ ಆಳಂದ್‍ನ ಎನ್‍ಎಸ್‍ಎಲ್ ಕಾರ್ಖಾನೆ ರೈತರಿಗೆ ಕಬ್ಬಿನ ಬಾಕಿ ಕೊಡಬೇಕಾದ 6 ಕೋಟಿ ರೂ.ಗಳನ್ನು ಕೂಡಲೇ ಪಾವತಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆ ಎದುರು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ್ ಅವರು ಎಚ್ಚರಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಕ್ಕರೆ ಕಾರ್ಖಾನೆಗಳು ಸರ್ಕಾರಿ ಆದೇಶ ಹಾಗೂ ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬಿನ ದರ ನೀಡುವಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ವರ್ಷವೂ ಅನ್ಯಾಯವಾಗುತ್ತಿದೆ. ಸರ್ಕಾರ ನಿಗದಿಗೊಳಿಸಿದ ದರವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಹಣ ಪಾವತಿಸುತ್ತಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ನಿಗದಿಗೊಳಿಸಿದ ಕಬ್ಬಿನ ದರಕ್ಕೂ ಕಾರ್ಖಾನೆಗಳು ನೀಡುವ ದರಕ್ಕೂ ತಾಳಮೇಳ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಸುಮಾರು 62 ಸಕ್ಕರೆ ಕಾರ್ಖಾನೆಗಳಿದ್ದು, ಸರ್ಕಾರ ನಿಗದಿಪಡಿಸಿದ ದರವನ್ನು ಇಲ್ಲಿಯವರೆಗೂ ನೀಡದೇ ರೈತರಿಗೆ ಕೊಡಬೇಕಾದ ನಿಗದಿತ ಹಣವನ್ನು ಕೊಡದೇ ವಂಚಿಸುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರವು ಈ ಕೂಡಲೇ ಒಂದು ಸಲಹಾ ಸಮಿತಿಯನ್ನು ರಚಿಸುವ ಮೂಲಕ ದರ ನಿಗದಿ ಹಾಗೂ ಅನುಷ್ಠಾನದ ಕುರಿತು ಸ್ಪಷ್ಟನೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿ ವರ್ಷವೂ ಸಕ್ಕರೆ ಕಾರ್ಖಾನೆಗಳು ಆದೇಶವನ್ನು ಉಲ್ಲಂಘಿಸಿ ಕಡಿಮೆ ಬೆಲೆ ನೀಡುತ್ತ ಬಂದರೂ ಸಹ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಈ ಬಾರಿಯೂ ಅದೇ ರೀತಿಯ ವಂಚನೆಯನ್ನು ಸಕ್ಕರೆ ಕಾರ್ಖಾನೆಗಳು ಮಾಡುತ್ತಿವೆ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೊಳಿಸದೇ ಕಾರ್ಖಾನೆಗಳನ್ನು ಆರಂಭಿಸಲಾಗುತ್ತಿದೆ. ಇದು ಸಲ್ಲದು ಎಂದು ಅವರು ಆಕ್ಷೇಪಿಸಿದರು.
ರಾಜ್ಯ ಸರ್ಕಾರವು ನೀಡಿದ ಆದೇಶದಂತೆ ಆಳಂದ್ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಇದುವರೆಗೂ ದರ ನಿಗದಿಗೊಳಿಸಿಲ್ಲ. ಸರ್ಕಾರ ನಿಗದಿಗೊಳಿಸಿದ ದರ ನೀಡುವುದಾಗಿಯೂ ಪ್ರಕಟಿಸಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಸರ್ಕಾರ ನಿಗದಿಗೊಳಿಸಿದ ದರ ನೀಡುವಂತೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಲಬುರ್ಗಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಪ್ರಕಾರ ಕಳೆದ ವರ್ಷ ಪ್ರತಿ ಟನ್‍ಗೆ 100ರೂ.ಗಳನ್ನು ನೀಡಬೇಕಿತ್ತು. ಆಳಂದ್ ಎನ್‍ಎಸ್‍ಎಲ್ ಕಾರ್ಖಾನೆಯೊಂದರಿಂದಲೇ 6 ಕೋಟಿ ರೂ.ಗಳುಬಾಕಿ ಉಳಿಸಿಕೊಂಡಿದ್ದು, ಇದುವರೆಗೂ ಹಣ ನೀಡಿಲ್ಲ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದೇ ಹೋದಲ್ಲಿ ಕಾರ್ಖಾನೆ ಎದುರು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಕೋರೆ ಮತ್ತು ಹಣಮಂತ್ ಭೂಸನೂರು ಉಪಸ್ಥಿತರಿದ್ದರು.