ಆಳಂದ್ ಪೋಲಿಸರ ಪಕ್ಷಪಾತ ನೀತಿ ವಿರುದ್ಧ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ನ. 13ರಂದು ಪ್ರತಿಭಟನೆ

ಕಲಬುರಗಿ.ನ.7: ಜಿಲ್ಲೆಯ ಆಳಂದ್ ಠಾಣೆಯ ಪೋಲಿಸರು ಅನೀತಿ ಹಾಗೂ ಪಕ್ಷಪಾತ ನೀತಿಯನ್ನು ಅನುಸರಿಸುವ ಮೂಲಕ ಅನ್ಯಾಯ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನವೆಂಬರ್ 13ರಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ್ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಪ್ರಮುಖ ಮೌಲಾ ಮುಲ್ಲಾ ಅವರು ಇಲ್ಲಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ್ ಠಾಣೆಯ ಪೋಲಿಸರು ನ್ಯಾಯದ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು.
ಆಳಂದ್ ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ಜಮಾದಾರ್ ಅವರ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಶರಥ್ ಪಾತ್ರೆ ಅವರು ಹಲ್ಲೆ ಮಾಡಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರು ದೂರು ಪಡೆಯದೇ ಮೊದಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ದೂರು ಪಡೆಯುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಜನಪ್ರತಿನಿಧಿಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧ ಅಟ್ರಾಸಿಟಿ ಪ್ರಕರಣದ ಬೆದರಿಕೆ ಹಾಕಿದ್ದಾರೆ. ಇದು ಅಟ್ರಾಸಿಟಿ ಕಾಯ್ದೆಯ ದುರ್ಬಳಕೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಆಳಂದ್ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬದಲು ಆಳಂದ್ ಠಾಣೆಯ ಪೋಲಿಸರು ಮಾಜಿ ಶಾಸಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅದೇ ರೀತಿ ಖಜೂರಿ ಗ್ರಾಮದ ರೈತ ಶಾಮ್ ಗಾಯಕವಾಡ್ ಎಂಬಾತನ ಪ್ರಕರಣದಲ್ಲಿಯೂ ಆಳಂದ್ ಠಾಣೆಯ ಪೋಲಿಸರ ವರ್ತನೆ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ್ ಮಾಡಿಯಾಳ್, ವಿಶ್ವನಾಥ್ ಬಿರಾದಾರ್ ಮುಂತಾದವರು ಉಪಸ್ಥಿತರಿದ್ದರು.