ಆಳಂದ್ ದರ್ಗಾ ಆವರಣದಲ್ಲಿ ರಾಘವ ಚೈತನ್ಯರ ಶಿವಲಿಂಗಕ್ಕೆ ಪೂಜೆ:ಬಿಜೆಪಿಯ ರಥಯಾತ್ರೆಗೆ ಉಚ್ಛ ನ್ಯಾಯಾಲಯದ ಶರತ್ತುಬದ್ಧ ಅನುಮತಿ

ಕಲಬುರಗಿ:ಮಾ.02: ಜಿಲ್ಲೆಯ ಆಳಂದ್ ಪಟ್ಟಣದ ಪ್ರಸಿದ್ಧ ಸೂಫಿ ಸಂತ್ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ರಾಘವ ಚೈತನ್ಯ ದೇವಸ್ಥಾನ ಇದೆ ಎನ್ನಲಾಗುತ್ತಿರುವ ಶಿವಲಿಂಗದ ಪೂಜೆಗಾಗಿ ಬಿಜೆಪಿ ಹಮ್ಮಿಕೊಂಡಿರುವ ರಥಯಾತ್ರೆಗೆ ಇಲ್ಲಿನ ಉಚ್ಛ ನ್ಯಾಯಾಲಯವು ಶರತ್ತುಬದ್ಧ ಅನುಮತಿ ನೀಡಿದೆ.
ಸುಕ್ಷೇತ್ರ ನರೋಣಾ ಗ್ರಾಮದಿಂದ ಆಳಂದ್ ಪಟ್ಟಣದ ಮಶಾಕ್ ದರ್ಗಾದವರೆಗೆ ಹಮ್ಮಿಕೊಂಡಿರುವ ರಥಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆಳಂದ್ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷನಂದ್ ಗುತ್ತೇದಾರ್, ಹಿಂದೂ ಜಾಗರಣ ವೇದಿಕೆಯ ನಾಗೇಂದ್ರ ಕಬಾಡೆ ಹಾಗೂ ಎಸ್.ಎ. ಪಾಟೀಲ್ ಅವರನ್ನು ಒಳಗೊಂಡು ಮೂವರು ಅರ್ಜಿದಾರರು ಸ್ಥಳೀಯ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ಪೀಠವು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ರಥಯಾತ್ರೆ ನಡೆಸಲು ಪ್ರಮುಖ ಐದು ಶರತ್ತುಗಳನ್ನು ವಿಧಿಸಿ ಅವಕಾಶ ನೀಡಿದೆ.
ರಥಯಾತ್ರೆಯನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ರಥಯಾತ್ರೆ ನಡೆಸಬಾರದು. ವಿಶೇಷವಾಗಿ ಮಸೀದಿ ಮತ್ತು ಚರ್ಚ್ ಇರುವ ಮಾರ್ಗದಲ್ಲಿ ನಡೆಸದಂತೆ ಮತ್ತು ರಥಯಾತ್ರೆ ವೇಳೆ ಬೇರೆ ಧರ್ಮಿಕ ಸಮುದಾಯಗಳಿಗೆ ಧಕ್ಕೆ ಉಂಟುಮಾಡುವ ಘೋಷಣೆಗಳು ಕೂಗದಿರುವುದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಥಯಾತ್ರೆ ನಡೆಸಬೇಕೆಂದು ತಿಳಿಸಿದೆ.
ಯಾತ್ರೆ ನಡೆಸುವ ಆಯೋಜಕರಿಂದ ಈ ಕುರಿತು ಜಿಲ್ಲಾಡಳಿತ ಮುಚ್ಚಳಿಕೆ ಪಡೆದು ಅದರೊಂದಿಗೆ ಅವರ ವಿಳಾಸದ ದಾಖಲೆ ಮತ್ತು ಆಧಾರ ಕಾರ್ಡ್, ಮೊಬೈಲ್ ಹಾಗೂ ದೂರವಾಣಿ ಸಂಖ್ಯೆ ಪಡೆಯಬೇಕೆಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸೂಚಿಸಿದೆ.
ಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಯಾಗದಂತೆ ಮತ್ತು ಸೂರ್ಯ ಮುಳುಗುವ ಮುನ್ನವೇ ರಥಯಾತ್ರೆ ಕೈಬಿಡಬೇಕು. ಡಿಜೆ ಮತ್ತು ಮ್ಯೂಜಿಕ್ ಸಿಸ್ಟಮ್ ಹಾಕಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ರಥಯಾತ್ರೆ ಶಾಂತಿಯುತವಾಗಿ ನಡೆಸಬೇಕೆಂದು ಸೂಚನೆ ನೀಡಿ ರಥಯಾತ್ರೆಗೆ ಅವಕಾಶ ನೀಡಿದೆ.
ಕಳೆದ ಬಾರಿಯೂ ಸಹ ಮಹಾಶಿವರಾತ್ರಿಯಂದು ದರ್ಗಾ ಆವರಣದಲ್ಲಿದ್ದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮುಂದಾದಾಗ 144 ಕಲಂ ನಿಷೇಧಾಜ್ಞೆ ವಿಧಿಸಲಾಗಿತ್ತು. ಆದಾಗ್ಯೂ, ಅದನ್ನು ಉಲ್ಲಂಘಿಸಿ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಸುಭಾಷ್ ಆರ್. ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಬಸವರಾಜ್ ಮತ್ತಿಮೂಡ್ ಮುಂತಾದವರು ಮೆರವಣಿಗೆ ಮೂಲಕ ದರ್ಗಾಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರಿಂದ ಕೇಂದ್ರ ಸಚಿವರು ಹಾಗೂ ಶಾಸಕರ ಕಾರುಗಳು ಜಖಂಗೊಂಡಿದ್ದವು. ಸ್ವತ: ಜಿಲ್ಲಾಧಿಕಾರಿಗಳ ಕಾರಿನ ಮೇಲೂ ಸಹ ಕಲ್ಲು ತೂರಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿ ಉಚ್ಛ ನ್ಯಾಯಾಲಯವು ಶರತ್ತುಬದ್ಧ ಅನುಮತಿ ಕೊಟ್ಟಿದ್ದರಿಂದ ಈ ಬಾರಿಯ ಮಹಾಶಿವರಾತ್ರಿಯಂದು ಆಳಂದ್ ದರ್ಗಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂಭವ ಇದ್ದು, ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.