ಆಳಂದದಲ್ಲಿ ಮಾಸಿಕ ಸಂಜೀವಿನಿ ಸಂತೆ ಮೇಳ ಉದ್ಘಾಟನೆ

ಕಲಬುರಗಿ,ನ.11:ಕಲಬುರಗಿ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಳಂದ ತಾಲೂಕು ಪಂಚಾಯತ್ ಇವರ ಸಹಕಾರದೊಂದಿಗೆ ಪ್ರಥಮ ಹಂತದಲ್ಲಿ ಕಿಣ್ಣಿ ಸುಲ್ತಾನ ಎನ್.ಆರ್.ಎಲ್.ಎಮ್-ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇವರ ನೇತೃತ್ವದಲ್ಲಿ ಇದೇ ನವೆಂಬರ್ 11 ಹಾಗೂ 12 ರಂದು ಎರಡು ದಿನಗಳ ಕಾಲ ಆಳಂದ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಮಾಸಿಕ ಸಂಜೀವಿನಿ ಸಂತೆ ಮೇಳವನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಗದೇವಪ್ಪಾ ಅವರು ಗುರುವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸಂತೆ ಮಾರುಕಟ್ಟೆ ಮೂಲಕ ಪ್ರತಿಯೊಬ್ಬ ಮಹಿಳೆಯರು ಆರ್ಥಿಕವಾಗಿ ಸಧೃಡವಾಗಬೇಕು. ಸ್ವ-ಸಹಾಯ ಸಂಘದ ಸದಸ್ಯರು ಯಾವುದೇ ಕಿಳರಿಮೆ ಭಾವನೆ ಹೊಂದದೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪನಗಳನ್ನು ತಯಾರಿಸಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಢ ಹೊಂದಬೇಕು ಎಂದರು. ಆಳಂದ ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಲೋಹಿತ ಎಮ್.ಪಿ, ಅರುಣಕುಮಾರ, ಡಿಡಿಡಬ್ಲ್ಯೂಸಿಡಿಯಿಂದ ನಂದಾದೇವಿ, ಒಕ್ಕೂಟದ ಅಧ್ಯಕ್ಷೆ ಬೌರಮ್ಮಾ, ಯಲ್ಲಾಲಿಂಗ ಸಂಗೋಳಗಿ ಸೇರಿದಂತೆ ತಾಲೂಕ ಅಭಿಯಾನದ ನಿರ್ವಹಣಾ ಘಟಕದ ಸಿಬ್ಬಂದಿಗಳು, ಸ್ವ-ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ನಂದಾದೇವಿ ಸ್ವಾಗತಿಸಿದರು. ತಾಲೂಕ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಗುರುನಾಥ ಕವಳೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಲಾವತಿ ಅವರು ವಂದಿಸಿದರು.
ಜಿಲ್ಲಾ ಪಂಚಾಯತ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪ್ರತಿ ತಿಂಗಳು ಸಂತೆ ಮೇಳ (ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಕರಕುಶಲ, ಗೃಹ ಉಪಯೋಗಿ ವಸ್ತುಗಳು ಮತ್ತು ಇತ್ಯಾದಿ) ವನ್ನು ಆಯೋಜಿಸಲಾಗುತ್ತದೆ.