ಆಲ್ ಅಮಿನ್ ಪ.ಪೂ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಟಿ

ಬೀದರ: ನ.2:ಜಮಾತೇ ಇಸ್ಲಾಮೀ ಹಿಂದ್ ವತಿಯಿಂದ ಆಚರಿಸುತ್ತಿರುವ ಸೀರತ್ ಅಭಿಯಾನ “ಪ್ರವಾದಿ ಮುಹಮ್ಮದ್ (ಸ)-ಮಾನವತೆಯ ಮಾರ್ಗದರ್ಶಕ” ಕುರಿತು ಇದಾರಾ-ಎ-ಅದಬೇ ಇಸ್ಲಾಮೀ ವತಿಯಿಂದ ಒಂದು ಬಹುಭಾಷಾ ಕವಿಗೋಷ್ಠಿ ನಗರದ ಅಲ್-ಅಮೀನ್ ಪದವಿ ಪೂರ್ವ ಕಾಲೇಜಿನ ಅಬ್ದುಲ್ ಮಜೀದ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕವಿಗೋಷ್ಠಿಯ ಉದ್ಘಾಟನೆ \ರಫೀಕ ಅಹ್ಮದ್ ರವರು ಪವಿತ್ರ ಕುರ್‍ಆನ್ ಪಠಣ ಹಾಗೂ ಉದ್ಬೋಧೆಯಿಂದ ಮಾಡಿ ಮಾತನಾಡಿದರು.

ಪ್ರವಾದಿ ಮುಹಮ್ಮದ್ ಇಡೀ ಮಾನವತೆಯ ಕುರಿತು ಅನುಕಂಪ ಹಾಗೂ ಸಹಾನುಭೂತಿ ಹೊಂದಿದ್ದರು. ಮಾನವರು ಈ ಲೋಕ ಹಾಗೂ ಪರಲೋಕದಲ್ಲಿ ಸಂಕಷ್ಟದಿಂದ ಪಾರಾಗಿ ಯಶಸ್ಸುಗಳಿಸಬೇಕು ಎಂದು ಬಯಸುತ್ತಿದ್ದರು. ಅದಗೋಸ್ಕರವೇ ಅವರು ತಮ್ಮ ಇಡೀ ಜೀವನ ಶ್ರಮಿಸಿದರು. ಪ್ರವಾದಿ ಹೇಳುತ್ತಾರೆ, ನಾನು ಪ್ರತಿಯೊಬ್ಬನ ಟೊಂಕ ಹಿಡಿದು ನರಕದ ಬೆಂಕಿಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಮಾನವರು ಬೆಂಕಿಯಲ್ಲಿಯೇ ಬೀಳಲು ಪ್ರಯತ್ನಿಸುತ್ತಿದ್ದಾರೆ. ಜನರು ತಿಳಿದುಕೊಂಡಂತೆ ಪ್ರವಾದಿಯವರು ಜನರಿಗೆ ಸಂಕಷ್ಟ ನೀಡಲು ಬಂದಿಲ್ಲ, ಬದಲಾಗಿ ಅವರು ಮಾನವರಿಗೆ ಅನುಗ್ರಹವಾಗಿದ್ದಾರೆ. ಜನರು ನಷ್ಟ ಹೊಂದುವುದು ಪ್ರವಾದಿಯವರಿಗೆ ಅತೀವ ಅಸಹನೀಯವಾಗಿದೆ. ಅವರು ಜನರ ಯಶಸ್ಸಿಗಾಗಿ ಹಂಬಲಿಸುವವರಾಗಿದ್ದರು ಎಂದರು.

ಕವಯತ್ರಿ ಜಯಶ್ರೀ ಸುಕಾಲೆ “ಮಾನವ ಕುಲದ ಕಣ್ಮಣಿ-ಮುಹಮ್ಮದ ಪೈಗಂಬರ್” ಎಂಬ ಶೀರ್ಷಿಕೆಯ ಕವನ ವಾಚನ ಮಾಡಿದರೆ, ರಮೇಶ ಬಿರಾದಾರ ರವರು “ಖಾಯಂ ನಮಾಜ” ಎನ್ನುವ ಕವಿತೆ ಓದಿದರು. ವಿದ್ಯಾವತಿ ಬಲ್ಲೂರ ರವರು “ಆಸೆ, ಆಮಿಸೆ ತೊರೆಯುವುದೇ ಜಿಹಾದ”, ಡಾ.ರಘುಶಂಖ ಭಾತಂಬ್ರಾ ರವರು “ಮಹಾ ಪ್ರವಾದಿ”, ಪ್ರೊ.ದೇವೇಂದ್ರ ಕಮಲ ರವರು “ಆಜ್ ಮುಝಪರ್ ಮುಹಮ್ಮದ ಕೀ ಮೆಹೆರಬಾನಿ ಹೋಗಯೀ” ಎನ್ನುವ ಕವನ ವಾಚನ ಮಾಡಿದರು.

ಉರ್ದು ಭಾಷೆಯಲ್ಲಿ ಮುನವ್ವರ್ ಅಲಿ ಶಾಹಿದ್, ಲತೀಫ ಖಲೀಶ, ಹಾಮೇದ ಸಲೀಮ, ಮುಹಮ್ಮದ ಕಮಾಲುದ್ದೀನ್ ಶಮೀಮ, ಮೀರ್ ಬಿದ್ರಿ, ಮುಹಮ್ಮದ ಝಫರುಲ್ಲಾ ಖಾನ, ಅಮೀರುದ್ದಿನ್ ಅಮೀರ್ ಹಾಗೂ ಸೈಯ್ಯದ್ ಜಮೀಲ ಅಹ್ಮದ್ ಹಾಷ್ಮಿ ತಮ್ಮ ಕವನಗಳನ್ನು ವಾಚನ ಮಾಡಿದರು.

ಷಾ ಅಸ್ಲಂ ಖಾದ್ರಿ ಕಾರ್ಯಕ್ರಮ ನಿರೂಪಿಸಿ, ಮುಹಮ್ಮದ್ ನಿಜಾಮುದ್ದೀನ್ ವಂದಿಸಿದರು. ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಡಾ.ಬಸವರಾಜ ಬಲ್ಲೂರ, ಸಂಜೀವಕುಮಾರ ಅತಿವಾಳೆ, ಮುಬಶ್ಶಿರ್ ಶಿಂಧೆ ಉಪಸ್ಥಿತರಿದ್ದರು.