
ಪ್ಯಾರಿಸ್ (ಫ್ರಾನ್ಸ್), ಏ.೧೦- ಜಗತ್‌ಪ್ರಸಿದ್ಧ ಫ್ರೆಂಚ್ ಆಲ್ಪ್ಸ್‌ನ ಪರ್ವತಶ್ರೇಣಿಯ ಅರ್ಮಾನ್ಸೆಟ್ಟೆ ಹಿಮನದಿಯಲ್ಲಿ ನಡೆದ ಹಿಮಕುಸಿತದ ಪರಿಣಾಮ ಇಬ್ಬರು ಪರ್ವತ ಮಾರ್ಗದರ್ಶಕರು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಇದು ಆಗ್ನೇಯ ಫ್ರಾನ್ಸ್‌ನ ಮಾಂಟ್ ಬ್ಲಾಂಕ್ ಬಳಿಯ ಅರ್ಮಾನ್ಸೆಟ್ಟೆ ಹಿಮನದಿಯಲ್ಲಿ ಸ್ಥಳೀಯ ಕಾಲಮಾನ ಭಾನುವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಇನ್ನು ಮೃತರಲ್ಲಿ ಇಬ್ಬರು ಪರ್ವತ ಮಾರ್ಗದರ್ಶಕರಾಗಿದ್ದಾರೆ ಎಂದು ಸ್ಥಳೀಯ ಉಪಮೇಯರ್ ಖಚಿತಪಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲದೆ ದುರ್ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಹಾಗಾಗಿ ಸಾವಿನ ಸಂಖ್ಯೆಯಲ್ಲಿ ಏರಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪರ್ವತದ ತುದಿಯಿಂದ ಬೇರ್ಪಟ್ಟ ಹಿಮದ ಚಪ್ಪಡಿಯಿಂದ ಹಿಮಪಾತ ಉಂಟಾಗಿದೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮತ್ತು ಶ್ವಾನದಳ ಮತ್ತು ಪರ್ವತ-ಪಾರುಗಾಣಿಕಾ ತಂಡಗಳು ದಿನವಿಡೀ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದೆ. ಅಲ್ಲದೆ ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಸೋಮವಾರ ಕೂಡ ಮುಂದುವರೆದಿದೆ ಎನ್ನಲಾಗಿದೆ.