ಆಲೂರು ಗ್ರಾಪಂಗೆ ಶಾಂತಿಯುತ ಮತದಾನ

ಬೆಂಗಳೂರು.ಮಾ೨೯: ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯತಿ ಚುನಾವಣೆ ಇಂದು ಶಾಂತಿಯುತವಾಗಿ ನಡೆಯಿತು.
೨೭ ಸ್ಥಾನ ಬಲದ ಅಲೂರು ಗ್ರಾಮ ಪಂಚಾಯಿತಿಗೆ ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಕೇವಲ ೫ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು.ಉಳಿದ ೨೨ ವಾರ್ಡ್ ಗಳ ಜನತೆ
ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರಿಂದ ಅತಂತ್ರವಾಗಿತ್ತು. ಅದರೀಗ ಮತ್ತೆ ಚುನಾವಣೆ ಘೋಷಣೆಯಾಗಿ ಏಳು ಮಂದಿ ಅವಿರೋಧ ಆಯ್ಕೆ ಗೊಂಡಿದ್ದರು.ಉಳಿದ ೧೫ ಸ್ಥಾನಗಳಿಗೆ ಇಂದು ಮತದಾನ ನಡೆಯಿತು.ರೇವಣಸಿದ್ದಯ್ಯ ಚುನಾವಣಾಧಿಕಾರಿಯಾಗಿದ್ದರು.
ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೆಗ್ಗಡದೇವನಪುರದ ೬ ,ತಮ್ಮೇನಹಳ್ಳಿಯ ೪,ಆಲೂರಿನ ೫ ಸ್ಥಾನಗಳಿಗೆ ಚುನಾವಣೆ ನಡೆಯಿತು.ಇಂದು ೧೫ ಸ್ಥಾನಗಳಿಗೆ ಚುನಾವಣೆ ನಡೆಯಿತು, ಒಟ್ಟು ಏಳು ಮತಗಟ್ಟೆಗಳನ್ನು ಹಾಕಲಾಗಿತ್ತು.ಯಾವುದೇ ತೊಂದರೆ ಇಲ್ಲದೆ ಚುನಾವಣೆ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಒಟ್ಟು ೧೫ ಸ್ಥಾನಗಳಿಗೆ ೩೬ ಉಮೇದುವಾರರು ಕಣದಲ್ಲಿದ್ದರು.ಮೂರೂ ಗ್ರಾಮಗಳಲ್ಲೂ ಬೆಳಿಗ್ಗೆ ೭ ಗಂಟೆಯಿಂದಲೇ ಮತದಾನ ಶಾಂತಿಯುತವಾಗಿ ನಡೆಯಿತು.ಬೆಳಗ್ಗೆ ೭ ರಿಂದ ೧೦ ಗಂಟೆಯವರೆಗೂ ಮತದಾನ ಸ್ವಲ್ಪ ಚುರುಕಾಗಿತ್ತು.ಕಾರಣ,ಕೆಲಸಕ್ಕೆ ಹೋಗಬೇಕಾದವರು ಬೇಗ ಬಂದು ತಮ್ಮ ಹಕ್ಕು ಚಲಾಯಿಸಿದರು.ವಯಸ್ಸಾದವರನ್ನು ಆಯಾಯ ಅಭ್ಯರ್ಥಿಗಳು ವಾಹನಗಳಲ್ಲಿ ಕರೆ ತಂದು ಮತಕೇಂದ್ರಗಳಿಗೆ ಬಿಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.ಆದರೆ,ಮತದಾರರನ್ನು ಸೆಳೆಯಲು ಮತಕೇಂದ್ರಗಳ ಬಳಿ ಅಭ್ಯರ್ಥಿಗಳ ಬೆಂಬಲಿಗರು ಅಂತಿಮ ಪ್ರಯತ್ನ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.
ಮತ ಎಣಿಕೆ ಮಾ ೩೧ ರಂದು ಮಾದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆಯಲಿದೆ.