ಆಲಿಯಾ ಕೊರೊನಾ

ಹೊಸದಿಲ್ಲಿ, ಎ.೨- ಬಾಲಿವುಡ್ ಬೆಡಗಿ ಆಲಿಯಾ ಭಟ್ ಅವರಿಗೆ ಕೋವಿಡ್-೧೯ ಸೋಂಕು ದೃಢಪಟ್ಟಿದೆ. ಈ ಅಂಶವನ್ನು ಸ್ವತಹ ಅವರೇ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ.
ಗುರುವಾರ ತಡರಾತ್ರಿ ಹೇಳಿಕೆ ನೀಡಿರುವ ನಟಿ, “ಎಲ್ಲರಿಗೂ ಹಲೋ ಹೇಳುತ್ತಿದ್ದೇನೆ. ನನಗೆ ಕೋವಿಡ್-೧೯ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಕ್ಷಣ ಐಸೊಲೇಟ್ ಆಗಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ನಾನು ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷಾ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಕೃತಜ್ಞತೆಗಳು. ಕಾಳಜಿ ವಹಿಸಿಕೊಳ್ಳಿ ಹಾಗೂ ಸುರಕ್ಷಿತವಾಗಿರಿ” ಎಂದು ಹೇಳಿದ್ದಾರೆ. ಆಲಿಯಾ ಭಟ್ ಮುಂಬೈನಲ್ಲಿ ಸಂಜಯ್ ಲೀಲಾ ಭನ್ಸಾಲಿಯವರ ’ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಚಿತ್ರೀಕರಣದಲ್ಲಿದ್ದರು. ಈ ತಿಂಗಳ ಆರಂಭದಲ್ಲಿ ಬನ್ಸಾಲಿಯವರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಕೆಲ ವಾರಗಳ ಬಳಿಕ ಚೇತರಿಸಿಕೊಂಡಿದ್ದರು. ಆಲಿಯಾ ಭಟ್ ಅವರ ಪ್ರಿಯಕರ ರಣಬೀರ್ ಕಪೂರ್ ಅವರಿಗೂ ಕಳೆದ ತಿಂಗಳು ಸೋಂಕು ಕಾಣಿಸಿಕೊಂಡಿತ್ತು. ರಣಬೀರ್ ಕಪೂರ್ ಅವರಿಗೆ ಕೊರೋನಾವೈರಸ್ ಸೋಂಕು ಪತ್ತೆಯಾದ ಕೆಲ ದಿನಗಳಲ್ಲಿ ಆಲಿಯಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ಕೆಲ ದಿನಗಳ ಐಸೊಲೇಶನ್ ಇದ್ದ ಬಳಿಕ ಇದೀಗ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಹೇಳಿಕೊಂಡಿದ್ದರು.