ಆಲಿಕಲ್ಲು ಮಳೆ : ಲಿಂಗನಾಯಕನಹಳ್ಳಿಯಲ್ಲಿ ಭತ್ತದ ಬೆಳೆ ಹಾನಿ

ಹೂವಿನಹಡಗಲಿ ಮೇ 01:ತಾಲೂಕಿನ ಲಿಂಗನಾಯಕನಹಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿದು ಅಪಾರ ಪ್ರಮಾಣದ ಭತ್ತದ ಬೆಳೆ ಹಾಳಾಗಿದೆ.
ಕಟಾವಿಗೆ ಬಂದಿರುವ ಭತ್ತವು ಆಲಿಕಲ್ಲು ಮಳೆಯ ರಭಸಕ್ಕೆ ನೆಲಕ್ಕೆ ಒರಗಿ ಬಿದ್ದಿದ್ದು, ಕಾಳುಗಳು ನೆಲದ ಪಾಲಾಗಿವೆ. ಲಿಂಗನಾಯಕನಹಳ್ಳಿ ವ್ಯಾಪ್ತಿಯಲ್ಲಿ 400 ಎಕರೆಯಷ್ಟು ಭತ್ತದ ಬೆಳೆ ಮಳೆಯಿಂದ ಹಾನಿಗೀಡಾಗಿದೆ.
ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಆಲಿಕಲ್ಲು ಮಳೆಯಿಂದ ಕಟಾವಿಗೆ ಬಂದಿರುವ ಭತ್ತದ ಬೆಳೆಯು ಹಾನಿಗೀಡಾಗಿದ್ದು, ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ರೈತರು ಆಗ್ರಹಿಸಿದರು.
‘ಮಳೆಯಿಂದ ಬೆಳೆ ಹಾನಿ ಸಂಭವಿಸಿರುವ ವರದಿಯನ್ನು ತಹಶೀಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ಕಳಿಸಲಿದ್ದೇವೆ. ಬೆಳೆನಷ್ಟ ಪರಿಹಾರವನ್ನು ನಂತರ ಸರ್ಕಾರ ನಿರ್ಧರಿಸಲಿದೆ’ ಎಂದು ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಹೇಳಿದರು.