
ವಿಜಯಪುರ:ಮಾ.18: ಅಕಾಲಿಕ ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ ಅಧ್ಯಕ್ಷರಾದ ಎಂ.ಎಸ್.ರುದ್ರಗೌಡರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾ.16 ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಸುಮಾರು 1500ಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಬಾಗಲಕೋಟ ಜಿಲ್ಲೆಯ ಖಮಖಂಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆ ಹಾನಿಯಾದೆ. ಚಿಕ್ಕಲಕಿ ಗ್ರಾಮದ ಹಲವು ಜಮೀನುಗಳಿಗೆ ಸ್ವತ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಈ ಅಕಾಲಿಕ ಮಳೆಯಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಎಕರೆಗೆ $2 ಲಕ್ಷಕ್ಕೂ ಹೆಚ್ಚು ವಾರ್ಷಿಕ ಖರ್ಚಾಗುತ್ತದೆ. ಈ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರದ ಅವಶ್ಯಕತೆಯಿದೆ. ಪರಿಹಾರ ಸಿಗದಿದ್ದರೆ ಮುಂದಿನ ವರ್ಷದ ನಿರ್ವಹಣೆಗೂ ತೊಂದರೆ ಆಗಲಿದೆ.
ಕಾರಣ ಕೂಡಲೇ ಸರ್ಕಾರ ಸರ್ವೇ ನಡೆಸಿ, ಎಲ್ಲೆಲ್ಲಿ ಹಾನಿಯಾಗಿದೆ ಎಂಬುದರ ವರದಿ ತರಿಸಿಕೊಂಡು, ಸೂಕ್ತ ಪರಿಹಾರ ನೀಡಬೇಕು. ನಷ್ಟಕ್ಕೆ ಸಿಲುಕಿಕೊಂಡಿರುವ ರೈತರಲ್ಲಿ ಹಲವರು ವಿಮೆ ಸಹ ತುಂಬಿರುವುದಿಲ್ಲ. ಈ ಕುರಿತಂತೆ ವಿಜಯಪುರ ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಕೂಡ ತೋಟಗಾರಿಕೆ ಸಚಿವರಾದ ಮುನಿರತ್ನ ಅವರಿಗೆ ಕರೆ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಹಾನಿಯಾದ ಪ್ರತಿ ರೈತರಿಗೆ ವಿಮೆ ಮೊತ್ತದಷ್ಟು ಪರಿಹಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.