ಆಲಮೇಲ ಮತ್ತು ಇಂಡಿ ತಾಲೂಕಿನಲ್ಲಿ ಪ್ರವಾಹದಿಂದ ಹೆಚ್ಚಿನ ರೀತಿಯಲ್ಲಿ ಹಾನಿಃ ಎಂ.ಸಿ. ಮುಲ್ಲಾ

ವಿಜಯಪುರ, ಅ.28-ಜಿಲ್ಲೆಯಲ್ಲಿ ಆಗಿರುವ ಪ್ರವಾಹದಿಂದ ತತ್ತರಿಸಿದ ರೈತಾಪಿ ಜನಾಂಗಕ್ಕೆ ತಕ್ಷಣದಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಕನಾಟಕ ರಕ್ಷಣಾ ವೇದಿಕೆವತಿಯಿಂದ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ವಿಜಯಪುರ ಜಿಲ್ಲೆಯ ಆಲಮೇಲ ಮತ್ತು ಇಂಡಿ ತಾಲೂಕಿನ ಪ್ರವಾಹದಿಂದ ಹೆಚ್ಚಿನ ರೀತಿಯಲ್ಲಿ ಹಾನಿಯಾಗಿರುತ್ತದೆ. ಇಲ್ಲಿಯ ಗ್ರಾಮದ ಜನರು ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿವೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿರುತ್ತದೆ. ಜಾನುವಾರುಗಳಿಗೆ ಮೇವುಗಳಿಲ್ಲದೇ ಸಾವಿನ ಪರಿಸ್ಥಿತಿ ಉಂಟಾಗಿದೆ ಎಂದರು.
ಇಲ್ಲಿಯ ರೈತಾಪಿ ಜನರ ಜೀವನ ಬೀದಿ ಪಾಲಾಗಿದ್ದು, ಇನ್ನುವರೆಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಪ್ರವಾಹ ಪೀಡಿತ ಪ್ರದೇಶಕ್ಕೆ ಕರವೇ ತಂಡ ಭೇಟಿ ನೀಡಿದ ಸಂಧರ್ಭದಲ್ಲಿ ಸಂತ್ರಸ್ತರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಇದೀಗ ನೀಡುತ್ತಿರುವ 10 ಸಾವಿರ ರುಪಾಯಿ ಪರಿಹಾರ ಸಹಾಯ ಧನ ತೀರ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಗೆ ಮಾಡಬೇಕು. ಅದರಂತೆ ದನ,À ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ತಾವು ನೀಡುತ್ತಿರುವ ಪರಿಹಾರ ಧನ ನಿಜವಾದ ಫಲಾನುಭವಿಗಳಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ವೈಮಾನಿಕ ಸಮೀಕ್ಷೆ ಮಾಡದಿರುವುದು ಇಲ್ಲಿನ ಜನರ ಮನಸ್ಸಿಗೆ ತುಂಬಾ ಗಾಸಿಯಾಗಿದೆ. ಬೆಂಗಳೂರು ನಗರದಲ್ಲಿ ತೋರಿಸುತ್ತಿರುವ ಕಾಳಜಿಯನ್ನು ನಮ್ಮ ಉತ್ತರ ಕರ್ನಾಟಕ ಭಾಗದ ಜನತೆಗೆ ತೋರಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸಾಯಬಣ್ಣ ಮಡಿವಾಳರ, ನಗರ ಅಧ್ಯಕ್ಷ ಫಯಾಜ ಕಲಾದಗಿ, ಜಿಲ್ಲಾ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಾದೇವ ರಾವಜಿ, ಸೈಯ್ಯದ ದೇವರಮನಿ, ಶಶಿಧರ ಗಣಿಯಾರ, ಗಂಗಾಧರ ಭೋವಿ, ಸೈಪನ್ ಜಮಾದಾರ, ರಜಾಕ ಕಾಖಂಡಕಿ,ಎಂ.ಎಸ್.ಶಿರಬೂರ,ಶರಣಯ್ಯ ನಂದಿಕೋಲ, ಐ.ಸಿ.ಪಠಾಣ, ಡಿ.ಎಸ್.ಪೂಜಾರಿ, ಪಿದಾ ಕಲಾದಗಿ, ಆಸೀಫ ಪೀರವಾಲೆ, ದಸ್ತಗೀರ ವಡಗೇರಿ, ದಾದಾಪೀರ ಮುಜಾವರ, ಬಾಬು ಯಾಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.