ಆಲಮಟ್ಟಿ:ಜು.28: ಇನ್ನೇನು ಬರಗಾಲದ ಭೀಕರ ಕರಿ ನೆರಳು ಆವರಿಸಿತು ಈ ಬಾರಿ ಎಂದು ಆತಂಕದ ಮಡುವಿನಲ್ಲಿದ್ದಾಗಲೇ ಜುಲೈ ಮಧ್ಯ ಭಾಗದಿಂದ ಮುಂಗಾರು ವರ್ಷಧಾರೆ ಬೆಂಬಿಡದೆ ಸುರಿಯ ತೊಡಗಿದೆ. ಪರಿಣಾಮ ಕೃಷ್ಣೆಯ ಒಡಲು ಇದೀಗ ಜಲರಾಶಿಯಿಂದ ಪುಟಿದೇಳುತ್ತಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಜಲಾನಯನ ಹಾಗೂ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆ ಆರ್ಭಟಿಸುತ್ತಿರುವರಿಂದ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಮೇಘ ವೃಷ್ಟಿ ಮುಂದುವರೆದ ಕಾರಣ, ಮುನ್ನೆಚ್ಚರಿಕೆಯ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ 1.75 ಲಕ್ಷ ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಕಳೆದ ಐದು ದಿನಗಳಿಂದ ಒಳಹರಿವು ನಿತ್ಯ ಲಕ್ಷ ಕ್ಯುಸೆಕ್ ದಾಟುತ್ತಿದೆ. ಗುರುವಾರ ಸಂಜೆ 6 ಕ್ಕೆ ಜಲಾಶಯದ ಒಳಹರಿವು 1,65,833 ಕ್ಯುಸೆಕ್ ಗೆ ತಲುಪಿದೆ. ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ನೆರೆಯ ಆತಂಕ ಸೃಷ್ಠಿಯಾಗಬಾರದು ಎನ್ನುವ ಕಾರಣಕ್ಕೆ ಹೊರಹರಿವನ್ನು ಸಂಜೆ 4 ಗಂಟೆಯಿಂದ 1.75 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ. ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 45 ಸಾವಿರ ಕ್ಯುಸೆಕ್ ಬಿಡುತ್ತಿರುವ ಕಾರಣ ಅಲ್ಲಿ 148 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಗುರುವಾರ ಬೆಳಿಗ್ಗೆ 1.25 ಲಕ್ಷ ಕ್ಯುಸೆಕ್ ಇದ್ದ ಹೊರಹರಿವು ಮಧ್ಯಾಹ್ನ 1.50 ಲಕ್ಷ ಕ್ಯುಸೆಕ್ ಹೆಚ್ಚಿಸಲಾಯಿತು. ಸಂಜೆಯಿಂದ ಅದನ್ನು 1.75 ಲಕ್ಷ ಕ್ಯುಸೆಕ್ ಗೇರಿಸಲಾಯಿತು.
519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.4 ಮೀ.ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 89.80 ಟಿಎಂಸಿ ಅಡಿ ನೀರಿದೆ.
ಪ್ರವಾಹ, ನೀರಿನ ಮಟ್ಟ, ಮಳೆಯ ಪ್ರಮಾಣ, ಮಹಾರಾಷ್ಟ್ರ ಅಧಿಕಾರಿಗಳ ಜತೆ ಸತತ ಸಂಪರ್ಕ ಇಟ್ಟುಕೊಂಡು ಒಳಹರಿವಿನ ಅಂದಾಜು ಲೆಕ್ಕಾಚಾರ ಮಾಡಿ, ಆಲಮಟ್ಟಿ ಜಲಾಶಯದಿಂದ ನೀರು ಬಿಡುವ ಬಗ್ಗೆ ನಿರ್ಧರಿಸಲಾಗುತ್ತಿದೆ. ಇದು ಪ್ರತಿ ಗಂಟೆಗೊಮ್ಮೆ ಬದಲಾವಣೆಯಾಗುತ್ತಿದೆ. ದಿನದ 24 ಗಂಟೆಯೂ ಸತತ ನಿಗಾ ಇಡಲಾಗುತ್ತಿದೆ ಎಂದು ಅಣೆಕಟ್ಟು ವಲಯದ ಪ್ರಭಾರಿ ಮುಖ್ಯ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು. ಸದ್ಯಕ್ಕೆ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಯಿಲ್ಲ ಎಂದರು. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಗುರುವಾರವೂ ಮುಂದುವರೆದಿದೆ. ಸುರಕ್ಷಿತ ಅಂತರ ಕಾಪಾಡಿಕೊಂಡು ಯಾವುದೇ ನೆರೆಯ ಆತಂಕ ಉಂಟಾಗಬಾರದು ಎಂದು ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.