ಆಲಮಟ್ಟಿಗೆ ಮೂರು ಪ್ರಮುಖ ರೈಲುಗಳ ನಿಲುಗಡೆ: ಉಮೇಶ ಕಾರಜೋಳ ಹರ್ಷ

ಸಂಜೆವಾರ್ತೆ,
ವಿಜಯಪುರ, ಮಾ.7:ಪ್ರಯಾಣಿಕರ ಅನುಕೂಲಕ್ಕಾಗಿ ಆಲಮಟ್ಟಿಯಲ್ಲಿ ಮೂರು ಪ್ರಮುಖ ರೈಲುಗಳು ನಿಲ್ಲುವಂತೆ ಮಾಡುವ ಮೂಲಕ ಕೇಂದ್ರ ರೈಲ್ವೆ ಇಲಾಖೆ ವಿಜಯಪುರ ಪ್ರಯಾಣಿಕರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿರುವುದು ಸಂತೋಷ ತಂದಿದೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರ ರೈಲ್ವೆಯನ್ನು ಜನರ ಆಪ್ತಸ್ನೇಹಿಯಾಗಿ ಮಾರ್ಪಾಡು ಮಾಡಿದೆ, ವಂದೇ ಭಾರತದಂತಹ ಶ್ರೇಷ್ಠ ರೈಲು ಸೇವೆಗಳ ಜೊತೆಗೆ ವಿವಿಧ ರೈಲ್ವೆ ಸೇವೆಗಳನ್ನು ಜನರ ಅನುಕೂಲಕ್ಕಾಗಿ ಜಾರಿಗೊಳಿಸಿರುವುದು ಅತ್ಯಂತ ಸಂತೋಷದ ಸಂಗತಿ, ಇದರ ಭಾಗವಾಗಿ ಶ್ರೀನಗರ-ಶಿರಡಿ-ಮೈಸೂರು ರೈಲು (ಎಸ್‍ಎನ್‍ಎಸ್‍ಐ – ಎಂವೈಎಸ್ ಎಕ್ಸಪ್ರೆಸ್), ಕೋಲ್ಕತ್ತಾ ಹವರಾ ಜಂಕ್ಷನ್ -ಬಿಕಾನೇರ್ ರೈಲು (ಬಿಕೆಎನ್-ವೈಆರ್‍ಪಿ ಎಕ್ಸಪ್ರೆಸ್) ಹಾಗೂ ಛತ್ರಪತಿ ಶಿವಾಜಿ ಮಹಾರಾಜಾ ಟರ್ಮಿನಲ್- ಹೊಸಪೇಟೆ (ಸಿಎಸ್‍ಎಂಟಿ-ಎಚ್‍ಪಿಟಿ ಎಕ್ಸಪ್ರೆಸ್) ರೈಲುಗಳು ಆಲಮಟ್ಟಿಯಲ್ಲಿ ನಿಲ್ಲಲಿವೆ, ಹೀಗಾಗಿ ಈ ಭಾಗದಿಂದ ಮುಂಬೈ ಮೊದಲಾದ ಮಹಾನಗರಗಳಿಗೆ ಪ್ರಯಾಣ ಮಾಡಬಯಸುವವರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ.