ಆಲಂಬಗಿರಿಯಲ್ಲಿ ವಿಜಯದಶಮಿ ಉತ್ಸವ

ಕೋಲಾರ,ಅ,೨೫- ಪುರಾಣ ಪ್ರಸಿದ್ದ ಆಲಂಬಗಿರಿ ಕ್ಷೇತ್ರದ ಕಲ್ಕಿ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿದೇವಾಲಯದಲ್ಲಿ ನವರಾತ್ರಿಯ ವಿಜಯದಶಮಿಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.
ನವರಾತ್ರಿಯ ಕೊನೆಯದಿನವಾದ ವಿಜಯದಶಮಿಯಂದು ಬೆಳಗಿನಿಂದಲೇ ಭಕ್ತರು ದೇವಾಲಯದಲ್ಲಿ ಪೂಜೆಗಾಗಿ ಆಗಮಿಸಿದ್ದರು. ವಿಜಯದಶಮಿಯಂದು ವಿಶೇಷವಾಗಿ ಶಮೀವೃಕ್ಷದ ಪೂಜೆಯನ್ನು ಏರ್ಪಡಿಸಲಾಗಿತ್ತು. ದೇವಾಲಯದಿಂದ ಸುಮಾರು ೧ ಕಿ.ಮೀ ದೂರದಲ್ಲಿರುವ ಶಮೀ ವೃಕ್ಷ ಮಂಟಪದ ಹತ್ತಿರ ನೆರವೇರಿಸಲಾಯಿತು.
ಶಮೀವೃಕ್ಷ ಮಂಟಪದ ಹತ್ತಿರಕ್ಕೆ ಭೂನೀಳಾ ಸಮೇತ ವೆಂಕಟರಮಣ ಸ್ವಾಮಿಯ ಉತ್ಸವ ವಿಗ್ರಹಗಳನ್ನು ವಿಶೇಷ ಮಂಟಪದಲ್ಲಿ ಅಲಂಕರಿಸಿ ಕರೆದೊಯ್ಯಲಾಯಿತು. ನೂರಾರು ಭಕ್ತರು ಆಗಮಿಸಿದ್ದರು. ಸಂಕೀರ್ತನಾ ಪಾದಯಾತ್ರೆಯಲ್ಲಿ ದೇವರ ಉತ್ಸವದೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ದಂಪತಿಗಳು ಭಾಗವಹಿಸಿ ಸಂಕೀರ್ತನೆಯೊಂದಿಗೆ ನಡೆದು ಬಂದರು.
ಶಮೀ ಮಂಟಪದ ಹತ್ತಿರ ವಿಶೇಷ ಪೂಜಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಮೀವೃಕ್ಷಕ್ಕೆ ಹೂಗಳಿಂದ ಅಲಂಕರಿಸಲಾಗಿತ್ತು. ಶಮೀವೃಕ್ಷದಲ್ಲಿ ಬಿಲ್ಲುಬಾಣಗಳನ್ನು ಇಟ್ಟು ಪೂಜಿಸಲಾಯಿತು. ಶಾಸ್ತ್ರೋಕ್ತವಾಗಿ ಅರ್ಚಕವೃಂದ ವೇದಘೋಷ ಮಾಡಿದರು. ಡಾ||ಎಂ.ಆರ್.ಜಯರಾಮ್‌ರವರು ಪೂಜೆ ನೆರವೇರಿಸಿದರು. ನಂತರ ಆಲಂಬಗಿರಿ ರಥ ಬೀದಿಯಲ್ಲಿ ಸ್ವಾಮಿಯ ಉತ್ಸವವನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಮನೆ ಮನೆಗೂ ಪೂಜೆಗೆ ನೀಡಿ ಭಕ್ತಿ ಭಾವವನ್ನು ಮೆರೆದರು. ನಂತರ ಉತ್ಸವ ಮೂರ್ತಿಗಳನ್ನು ದೇವಾಲಯಕ್ಕೆ ಕರೆತಂದು ಅಷ್ಟಾವಧಾನಸೇವೆಯನ್ನು ನೆರೆವೇರಿಸಲಾಯಿತು. ನಂತರ ಸಾಮೂಹಿಕವಾಗಿ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ಮಹಾ ಮಂಗಳಾರತಿ ಮಾಡಲಾಯಿತು.
ನವರಾತ್ರಿಯ ಒಂಬತ್ತು ದಿನಗಳಲ್ಲಿ ಆಲಂಬಗಿರಿಂii ದೇವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ, ಭಜನೆ, ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು. ದೇವಾಲಯದ ಭಜನಾ ಮಂಟಪದಲ್ಲಿ ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಶ್ರೀ ಬಾಲಕೃಷ್ಣ ಭಾಗವತರ್ ಹಾಗೂ ಭಕ್ತರು ಭಜನೆಯನ್ನು ಮಾಡಿದರು. ಭಕ್ತರಿಗೆ ವಿಜಯದಶಮಿ ಪ್ರಯುಕ್ತ ಸಿಹಿ ಹಂಚಲಾಯಿತು. ಆಲಂಬಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.