ಆರ್ ಸಿಬಿಗೆ ಆಘಾತ, ಗೆಲುವಿನ ನಗೆ ಬೀರಿದ ಸಿಎಸ್ ಕೆ

ಶಾರ್ಜಾ, ಸೆ.24- ಮರಳುಗಾಡಿನಲ್ಲಿ ನಡೆಯುತ್ತಿರು‌‌ವ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ವಿರುದ್ದ ಚೆನ್ನೈ ಸೂಪರ್‌‌ ಕಿಂಗ್ಸ್ ಆರು ವಿಕೆಟ್ ಗಳ ಗೆಲುವು ಸಾಧಿಸಿತು. ದೇವದತ್ ಹಾಗೂ ಕೊಹ್ಲಿ ಆಟ ವ್ಯರ್ಥವಾಯಿತು.


ಈ ಮೂಲಕ ದ್ವಿತೀಯಾರ್ಧದಲ್ಲಿ ಆರ್ ಸಿ ಬಿ ಸತತ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿತು.
156 ರನ್ ಗಳ ಬೆನ್ನಹತ್ತಿದ ಧೋನಿ ಪಡೆ 18.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಖೆದುಕೊಂಡು ವಿಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಸಿಎಸ್ ಕೆ ಅಂಕಪಟ್ಟಿಯಲ್ಲಿ‌ ಅಗ್ರಸ್ಥಾನ ಕಾಯ್ದುಕೊಂಡಿದೆ.
ಋತುರಾಜ್ ಗಾಯಕ್ವಾಡ್ 38, ಫಾ ಡುಪ್ಲೆಸಿಸ್ 31, ಅಂಬಟಿ ರಾಯುಡು 32, ಮೊಯಿನ್ ಅಲಿ 23 ರನ್ ಗಳಿಸಿ ತಂಡದ ಗೆಲುವಿನ ಹಾದಿ ಸುಗಮ ಗೊಳಿಸಿದರು.
ನಂತರ ಜತೆಗೂಡಿ‌ದ ನಾಯಕ ಧೋನಿ 11 ಹಾಗೂ ಸುರೇಶ್ ರೈನಾ ಅಜೇಯ 17 ರನ್ ಗಳಿಸುವ ಮೂಲಕ ಆರು ವಿಕೆಟ್ ಗಳ ಜಯ ತಂದುಕೊಟ್ಟರು.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ , ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.
ಪಡಿಕ್ಕಲ್ ಮತ್ತು ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ವಿಕೆಟ್ ಗೆ 111ರನ್ ಸೇರಿಸಿತು. ಈ ಹಂತದಲ್ಲಿ ಕೊಹ್ಲಿ 53 ರನ್ ಗಳಿಸಿ ಔಟಾದರು.
ಆರ್ ಸಿಬಿ ಪರ 150ನೇ ಪಂದ್ಯವಾಡುತ್ತಿರುವ ಎಬಿಡಿ 12 ರನ್ ಗಳಿಸಿ ನಿರಾಸೆ ಮೂಡಿಸಿದರು. 50 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಐದು ಬೌಂಡರಿ ಹಾಗೂ ಮೂರು‌‌ ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಔಟಾದರು.
ಒಂದು ಹಂತದಲ್ಲಿ ಬೃಹತ್ ಮೊತ್ತ ಪೇರಿಸುವ ಸುಳಿವು ನೀಡಿದ್ದ ಆರ್ ಸಿಬಿ ಕೇವಲ 16 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಸಿಎಸ್ ಕೆ ಉತ್ತಮ‌ ಬೌಲಿಂಗ್ ಪ್ರದರ್ಶಿಸುವ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಅಬ್ಬರಕ್ಕೆ ಕಡಿವಾಣ ಹಾಕಿತು.ಸಿಎಸ್ ಕೆ ಪರ ಬ್ರಾವೊ ಮೂರು, ಶಾರ್ದೂಲ್ 2 ಹಾಗೂ ದೀಪಕ್ ಚಾಹರ್ ಒಂದು ವಿಕೆಟ್ ಪಡೆದರು.