ಆರ್.ಡಿ. ಪಾಟೀಲ್‌ಗೆ ಸಹಕಾರ ಇಬ್ಬರ ಸೆರೆ

ಕಲಬುರಗಿ,ನ.೧೦- ದಾಳಿ ನಡೆಸುವ ವೇಳೆ ಕಂಪೌಂಡ್ ಹಾರಿ ತಪ್ಪಿಸಿಕೊಂಡಿರುವ ಕೆಇಎ ಪರೀಕ್ಷೆ ಅಕ್ರಮದ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಬಂಧನಕ್ಕೆ ತೀವ್ರ ಶೋಧ ಕೈಗೊಂಡಿರುವ ಪೊಲೀಸರು ಆತನಿಗೆ ರಕ್ಷಣೆ ನೀಡಿದ ಆರೋಪದಡಿ ಫ್ಲ್ಯಾಟ್ ಮಾಲೀಕ ಮತ್ತು ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ.
ವರದಾ ಲೇಔಟ್‌ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟಮೆಂಟ್‌ನಲ್ಲಿದ್ದ ಆರ್‌ಡಿ ಪಾಟೀಲ್ ಕಳೆದ ನ. ೬ ರಂದು ಪೊಲೀಸರು ದಾಳಿ ನಡೆಸಿದಾಗ ಪರಾರಿಯಾಗಿದ್ದು, ಆರೋಪಿಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಫ್ಲ್ಯಾಟ್ ಮಾಲೀಕ ಮತ್ತು ಅಪಾರ್ಟ್‌ಮೆಂಟ್ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ.
ಆರ್ ಡಿ ಪಾಟೀಲ್‌ಗೆ ಫ್ಲ್ಯಾಟ್ ಬಾಡಿಗೆ ನೀಡಿದ ಶಹಾಪೂರದ ಶಂಕರ್ ಗೌಡಯಾಳವಾರ್ ಮತ್ತು ಅಪಾರ್ಟ್ಮೆಂಟ್‌ನ ವ್ಯವಸ್ಥಾಪಕ ದಿಲೀಪ್ ಪವಾರ್ ಬಂಧಿತರಾಗಿದ್ದಾರೆ. ಆರ್‌ಡಿ ಪಾಟೀಲ್‌ನಿಂದ ವ್ಯವಸ್ಥಾಪಕ ದಿಲೀಪ್ ೧೦ ಸಾವಿರ ಮುಂಗಡ ಪಡೆದು, ಆ ಹಣ ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ಕೊಟ್ಟಿದ್ದ.
ಕೆಇಎ ಪರೀಕ್ಷೆ ಆಕ್ರಮದಲ್ಲಿ ಆರ್‌ಡಿ ಪಾಟೀಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಇದೇ ವೇಳೆ ಆರ್.ಡಿ ಪಾಟೀಲ್, ನ.೫ ರಂದು ರಾತ್ರಿ ೧೧ ಗಂಟೆಗೆ ಮಹಾಲಕ್ಷ್ಮೀ ಅಪಾರ್ಟಮೆಂಟ್‌ಗೆ ಆಗಮಿಸಿ ರಾತ್ರಿ ಅಲ್ಲಿಯೇ ಅಡಗಿದ್ದ. ಮರು ದಿನ ಮದ್ಯಾಹ್ನ ಪೊಲೀಸರು ಆಗಮಿಸುವ ಮಾಹಿತಿ ಸಿಕ್ಕ ತಕ್ಷಣ ಹಿಂಬದಿಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದನು.