
ಕಲಬುರಗಿ:ನ.07:ಎಫ್‍ಡಿಎ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‍ನಿಗೆ ಬಂಧಿಸುತ್ತೇವೆ. ಆ ಕುರಿತು ಯಾವುದೇ ದಯೆ ತೋರುವುದಿಲ್ಲ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಮಾಹಿತಿ ತಂತ್ರಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಏನಾದರೂ ಮಾಹಿತಿ ಇದ್ದರೆ ಬೇಕಾದರೆ ಕೊಡಲಿ ಎಂದರು.
ಹಿಂದೆ ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳನ್ನು ಪೋಲಿಸ್ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆ ಪಕ್ಷದ ಹಾಲಿ ಶಾಸಕರೇ ಹೇಳಿದ್ದರು. ಅಲ್ಲದೇ ಪಿಎಸ್‍ಐ ಹಗರಣದ ಪ್ರಮುಖ ಆರೋಪಿ ಮನೆಗೆ ಬಿಜೆಪಿ ಸರ್ಕಾರದ ಗೃಹ ಸಚಿವರೇ ಹೋಗಿ ಉಪಹಾರ ಮಾಡಿ ಬಂದಿದ್ದರು. ಅಕ್ರಮದ ಕುರಿತು ಸದನದಲ್ಲಿ ಪ್ರಸ್ತಾಪಿಸಿದರೂ ಸಹ ಗೃಹ ಸಚಿವರು ಮಾತ್ರ ಯಾವುದೇ ಅಕ್ರಮ ಆಗಿಲ್ಲ ಎಂದೇ ಹೇಳಿದ್ದರು. ನಂತರ ಪ್ರಕರಣ ಹೊರಬಿದ್ದ ಮೇಲೆ ಏಳು ತಿಂಗಳಿನ ನಂತರ ಆ ಕುರಿತು ಒಪ್ಪಿಕೊಂಡರು. ಈ ಕುರಿತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮನೆ ಪಾಠ ಮಾಡಿಕೊಂಡು ಬರಬೇಕು ಎಂದು ಅವರು ಲೇವಡಿ ಮಾಡಿದರು.
ನಾವು ಎಫ್‍ಡಿಎ ಪರೀಕ್ಷೆ ಅಕ್ರಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅದಕ್ಕಾಗಿ ಕಳೆದ ನಾಲ್ಕು ದಿನಗಳಿಂದ 20ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದೇವೆ. ಕೇವಲ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ಆದಾಗ್ಯೂ, ಪ್ರಮುಖ ಆರೋಪಿಯು ನಗರದಲ್ಲಿ ಇರುವ ಸೂಚನೆ ಸಿಕ್ಕಿತ್ತು. ಕೈ ತಪ್ಪಿಸಿಕೊಂಡು ಹೋಗಿದ್ದಾರೆ. ಆತನಿಗೆ ದಯೆ ತೋರುವುದಿಲ್ಲ ಎಂದು ಅವರು ಹೇಳಿದರು.
ಆರ್.ಡಿ. ಪಾಟೀಲ್ ನಗರದಲ್ಲಿ ಇರುವ ಕುರಿತು ಮಾಹಿತಿ ಬಂದ ಮೇಲೆ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಅವರಿಂದ. ಕೈ ಜಾರಿದ್ದಾರೆ ಎನ್ನುವುದು ಸುದ್ದಿ ಇದೆ. ಆ ಕುರಿತು ವಿಮರ್ಶೆ ಮಾಡಲಾಗುವುದು. ಅಧಿಕಾರಿಗಳ ತಪ್ಪಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪೋಲಿಸ್ ಅಧಿಕಾರಿಗಳ ಕೃಪಾಕಟಾಕ್ಷ ಇಲ್ಲ. ಏನಾದರೂ ನಿರ್ಲಕ್ಷ್ಯ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು ಅವರು ತಿಳಿಸಿದರು.
ನಾನಾಗಿರಬಹುದು, ಸರ್ಕಾರ ಆಗಿರಬಹುದು. ಈ ಪ್ರಕರಣವಂತಲ್ಲ. ಸರ್ಕಾರಿ ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಥಮ ಬಾರಿಗೆ ಬಿಗಿ ಭದ್ರತೆಯನ್ನು ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹ್ಯಾಂಡ್ ವೈಡ್ ಡಿವೈಸರ್ ಅಳವಡಿಸಲಾಗಿತ್ತು. 800 ಮೀಟರ್‍ಗಳಲ್ಲಿನ ಲಾಡ್ಜ್‍ಗಳನ್ನು ಪರಿಶೀಲಿಸಲಾಗಿತ್ತು. ವಾಹನಗಳ ನಿಲುಗಡೆ ಸ್ಥಳಗಳಲ್ಲಿಯೂ ತಪಾಸಣೆ ಸೇರಿದಂತೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ಇದು ಮೊದಲನೇಯ ಬಾರಿ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳು ಇರಲಿಲ್ಲ. ನಾವು ತಕ್ಷಣವೇ ಕ್ರಮ ಕೈಗೊಂಡಿದ್ದೇವೆ. ಸುಮ್ಮನೆ ಕುಳಿತಿಲ್ಲ. ಎಲ್ಲೆಲ್ಲಿ ಇದ್ದಾರೋ ಅವರಿಗೆ ಬಂಧಿಸಿ ನ್ಯಾಯ ಒದಗಿಸಿದ್ದೇವೆ. ಎಲ್ಲ ಕಡೆಗಳಲ್ಲಿಯೂ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ನಾವು ಆ ಕುರಿತು ಹೇಳಿಕೆ ನೀಡಿದ್ದೇವೆ. ನಾವು ಮೈಮೇಲೆ ಎಣ್ಣೆ ಹಾಕಿಕೊಂಡು ಕುಳಿತಿಲ್ಲ. ಏನಾದರೂ ಮಾಹಿತಿ ಇದ್ದರೆ ಬಿಜೆಪಿಯವರು ಕೊಡಲಿ. ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದು ಅವರು ಹೇಳಿದರು.
ಈ ಮೊದಲು ಆರೋಪಿ ಆರ್.ಡಿ. ಪಾಟೀಲ್ ಬೇರೆ ರಾಜ್ಯದಲ್ಲಿ ಇರುವ ಕುರಿತು ಮಾಹಿತಿ ಇತ್ತು. ಯಾರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾರೆ ಎಂಬುದರ ಕುರಿತು ಮಾಹಿತಿ ಇತ್ತು. ಆದಾಗ್ಯೂ, ನಿನ್ನೆ ಸ್ಥಳೀಯವಾಗಿ ಇರುವ ಕುರಿತು ಮಾಹಿತಿ ಇತ್ತು. ಆತನಿಗೆ ಬಂಧಿಸಲು ಹೋಗುವಾಗಲೇ ಆತ ಪರಾರಿಯಾಗಿದ್ದಾನೆ. ಆತನಿಗೆ ಎಲ್ಲಿದ್ದರೂ ಪೋಲಿಸರು ಬಂಧಿಸುವರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರೂ ಸಹ ಉಪಸ್ಥಿತರಿದ್ದರು.