
ರಾಯಚೂರು,ಜು.೧೨- ಅರ್.ಟಿ.ಪಿ.ಎಸ್ ಗುತ್ತಿಗೆ ಕಾರ್ಮಿಕರ ಖಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರ ೭-೭- ೨೦೦೫ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಿ ಆದೇಶಿಸಿರುವ ಹಿನ್ನಲೆ ೨೨-೬-೨೦೧೬ ರಂದು ಕಾರ್ಮಿಕ ಇಲಾಖೆ ಮುಖ್ಯ ಅಧೀನ ಕಾರ್ಯದರ್ಶಿ ಅವರು ಕಾರ್ಮಿಕರನ್ನು ಖಾಯಂಗೊಳಿಸಲು ನಿರ್ದೇಶನ ನೀಡಿದ್ದರು.ಆದರೆ ಕೆಪಿಸಿಎಲ್ ಆಡಳಿತವು ಸರ್ಕಾರ ಆದೇಶವನ್ನು ಉಲ್ಲಂಘಿಸಿದೆ ಎಂದು ಆರ್.ಟಿ.ಪಿ.ಎಸ್ ಗುತ್ತಿಗೆ ಕಾರ್ಮಿಕ ಮಹಾಸಂಘ ಅಧ್ಯಕ್ಷ ಆಯ್ಯಣ್ಣ ಮಹಾಮನಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸರ್ಕಾರ ರಚಿಸಲಾದ ಸಮಿತಿಗಳ ಶಿಫಾರಸ್ಸುಗಳು ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿಯ ಹಿನ್ನಲೆಯಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಸುಮಾರು ೨೫ ರಿಂದ ೩೦ ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಗೊಳಿಸುವಲ್ಲಿ ಹಾಗೂ ಸವಲತ್ತುಗಳನ್ನು ಪಡೆಯುವಲ್ಲಿ ವಂಚನೆಗೊಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್.ಟಿ.ಪಿ.ಎಸ್ ಗುತ್ತಿಗೆ ಕಾರ್ಮಿಕರು ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದರು ಕೂಡ ಇಂದಿಗೆ ೩೦ ಸಾವಿರ ವೇತನ ಪಡೆಯದೇ ಇರುವುದು ದುರಂತದ ಸಂಗತಿಯಾಗಿದೆ.ಕಾರ್ಮಿಕರ ಸಮಸ್ಯೆಗಳ ಕುರಿತು ಇಂಧನ ಸಚಿವರ ಗಮನಕ್ಕೆ ತಂದಾಗ ಆದಷ್ಟು ಬೇಗನೆ ಈ ಕುರಿತು ಸಭೆಯನ್ನು ಮಾಡುತ್ತೇನೆ ಎಂದು ಹೇಳಿ ಈವರೆಗೂ ಯಾವುದೇ ಸಭೆಯನ್ನು ಮಾಡಿಲ್ಲ.ಕೂಡಲೇ ಆರ್.ಟಿ.ಪಿ.ಎಸ್ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸದಿದ್ದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು.
ಈ ಸಂದರ್ಭದಲ್ಲಿ ಶರಣಬಸವ ಪಾಟೀಲ್,ಶ್ರೀನಿವಾಸ ಬಡಿಗೇರಾ,ಸುರೇಶ,ರಂಗಾರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.